ಕೋಲ್ಕತ್ತಾ, ನ. ೦೩ (DaijiworldNews/SM): ಕೇಂದ್ರದ ಮೋದಿ ಸರಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಆರೋಪಗಳನ್ನು ಮುಂದುವರೆಸಿದ್ದಾರೆ. ಕೇಂದ್ರ ಸರಕಾರ ನನ್ನ ಟೆಲಿಫೋನ್ ಕದ್ದಾಲಿಕೆ ಮಾಡಿದೆ. ಇದಕ್ಕೆ ನನ್ನಲ್ಲಿ ಸಾಕ್ಷಿಗಳಿವೆ ಎಂದು ಆರೋಪಿಸಿದ್ದಾರೆ.
ಇಸ್ರೇಲ್ ದೇಶದ ಸಂಸ್ಥೆ ಸರ್ಕಾರಕ್ಕೆ ಸೋಷಿಯಲ್ ಮೀಡಿಯಾ ಆಪ್ ವಾಟ್ಸಾಪ್ ನ ಗೂಢಚರ್ಯೆ ಮಾಡಲು ಯಂತ್ರಗಳ ಪೂರೈಕೆ ಮಾಡಿದೆ. ನನ್ನ ಟೆಲಿಫೋನ್ ನ್ನು ಕದ್ದಾಲಿಕೆ ಮಾಡಿರುವುದು ನಿಜ. ಇದಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ಸೂಕ್ತ ಸಾಕ್ಷಿಗಳಿವೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ದೇಶದ ರಾಜಕೀಯ ನಾಯಕರು, ಪತ್ರಕರ್ತರು, ವಕೀಲರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಪ್ರಮುಖ ವ್ಯಕ್ತಿಗಳ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂದು ಆರೋಪಿಸಿದರು.
ದೇಶದ ಪ್ರಮುಖ ವ್ಯಕ್ತಿಗಳ, ಕಾರ್ಯಕರ್ತರು, ಸಂಘಟನೆಗಳ ಚಟುವಟಿಕೆಗಳ ಮೇಲೆ ಗೂಢಚರ್ಯೆ ನಡೆಸಲು ಇಸ್ರೇಲ್ ಮೂಲದ ಕಂಪೆನಿಯನ್ನು ಬಳಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.