ಬೆಂಗಳೂರು, (DaijiworldNews/SM): ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳ ವಿರುದ್ಧ ಸಾಲು ಸಾಲು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಆಡಳಿತದಲ್ಲಿದ್ದ ಮೈತ್ರಿ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಪತನಗೊಳಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ. ಹಾಗೂ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಜನ ವಿರೋಧಿ ನೀತಿಯನ್ನು ಪ್ರಮುಖವಾಗಿರಿಸಿಕೊಂಡು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿದ್ದು, ಅವರು ಯಾರ ಮಾತನ್ನು ಕೇಳುತ್ತಿಲ್ಲ. ದೇಶದ ಪ್ರಜಾಪ್ರಭುತ್ವವನ್ನು ಸರ್ವನಾಶಮಾಡಲು ಪ್ರಧಾನಿ ಹೊರಟಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಸ್ತುತ ದೇಶದ ಆರ್ಥಿಕ ಸ್ಥಿತಿ ಐಸಿಯುನಲ್ಲಿದೆ. ಹಾಗೂ ಉದ್ಯೋಗ ಸೃಷ್ಟಿ ಕೋಮ ತಲುಪಿದೆ. ಪ್ರಸ್ತುತ ಸ್ಥಿತಿಗತಿಯಲ್ಲಿ ಉದ್ಯೋಗ ಸೃಷ್ಟಿ ವಿಚಾರ ಬಿಡು ಇದ್ದಂತಹ ಉದ್ಯೋಗವನ್ನೇ ಉಳಿಸಿಕೊಳ್ಳುವುದು ಪ್ರಶ್ನೆಯಾಗಿದೆ ಎಂದರು. ಈ ಎಲ್ಲಾ ವಿಚಾರಗಳಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ. ಇದರ ವಿರುದ್ಧ ರಾಜ್ಯದಲ್ಲಿ ನಿರಂತರ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ನವಂಬರ್ ನಾಲ್ಕರಿಂದಲೇ ಪ್ರತಿಭಟನೆಗಳು ಆರಂಭಗೊಳ್ಳಲಿದೆ ಎಂದರು.