ಹೈದರಾಬಾದ್, ನ 3 ( Daijiworld/MB) : ಪರೀಕ್ಷೆ ಬರೆಯಲೆಂದು ತೆರಲುತ್ತಿದ್ದ ಯುವತಿ ರಸ್ತೆ ಗುಂಡಿಗೆ ಬಿದ್ದು ಮೃತ ಪಟ್ಟ ಹೃದಯವಿದ್ರಾವಕ ಘಟನೆ ನಗರದ ನಲಗುಂದ ಕ್ರಾಸ್ ರೋಡ್ ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮೃತ ಪಟ್ಟ ಹುಡುಗಿ ಸಯ್ದಬಾದ್ ನಿವಾಸಿ ಕಾವ್ಯ ಎಂದು ಗುರುತಿಸಲಾಗಿದ್ದು, ತನ್ನ ಸಹೋದರ ಶಿವ ಸಾಯ್ ಜೊತೆ ಬೈಕ್ಕಿನಲ್ಲಿ ರೇಲ್ವೇ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಈ ಘಟನೆ ನಡೆದಿರುವುದು ತಿಳಿದುಬಂದಿದೆ.
ಅಪಘಾತದ ನಡೆದ ಸ್ಥಳದ ವಿಡಿಯೋದಲ್ಲಿ ಬೈಕು ಸವಾರ ಬಸ್ಸನ್ನು ಓವರ್ ಟೇಕ್ ಮಾಡಲು ಹೋದಾಗ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಬೈಕ್ ಕೆಳಗೆ ಬಿದ್ದಿದ್ದು ಬೈಕ್ಕಿನಲ್ಲಿ ಹಿಂದೆ ಕುಳಿತ್ತಿದ್ದ ಕಾವ್ಯ ಬಸ್ಸಿನ ಅಡಿಗೆ ಬಿದ್ದಿದ್ದಾರೆ.
ಸಹೋದರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಹೋದರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ.
ಈ ಕುರಿತು ಮಾತಾನಾಡಿದ ಚಂದ್ರಘಾಟ್ ಪೊಲೀಸ್ 'ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಸಹೋದರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ತಿಳಿಸಿದ್ದಾರೆ.
ಬಸ್ಸು ಚಾಲಕನ ಮೇಲೆ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ರಸ್ತೆಯಲ್ಲಿರುವ ಗುಂಡಿಯಿಂದಾಗಿ ತಾನು ಅಪಘಾತಕ್ಕೊಳಗಾಗಿ ಗಾಯವಾದಾಗ ಸೈಯದ್ ಅಝ್ಮತ್ ಹುಸೈನ್ ಜಾಫರ್ ಎಂಬ ಹೈದರಾಬಾದಿನ ಪತ್ರಕರ್ತ ಅಲ್ಲಿಯ ಸ್ಥಳಿಯ ಆಡಳಿತದ ವಿರುದ್ಧ ಕೇಸು ದಾಖಾಲಿಸಿದ್ದರು. ಈಗ ಕಾವ್ಯನ ಪೋಷಕರು ರಸ್ತೆಯ ಅವ್ಯವಸ್ಥೆಗೆ ಕಾರಣವಾದ ಆಡಳಿತದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.