ಬೆಂಗಳೂರು, ನ.04(Daijiworld News/SS): ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ದೇಶದ ಆರ್ಥಿಕ ವ್ಯವಸ್ಥೆ ಐಸಿಯುನಲ್ಲಿದೆ. ಉದ್ಯೋಗ ಸೃಷ್ಟಿ ಕೋಮಾವಸ್ಥೆಯಲ್ಲಿದೆ. ಉದ್ಯೋಗ ಸೃಷ್ಟಿಯಿರಲಿ ಇರುವ ಉದ್ಯೋಗ ಉಳಿಸಿಕೊಳ್ಳಲು ಆಗುತ್ತಿಲ್ಲ. ದೇಶ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿರುವ ಹಾಗೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸರ್ವಾಧಿಕಾರಿ ಪ್ರಧಾನಿ ನರೇಂದ್ರ ಮೋದಿ ಯಾರ ಮಾತನ್ನು ಕೇಳುತ್ತಿಲ್ಲ. ಪ್ರಜಾಪ್ರಭುತ್ವ ನಾಶ ಪಡಿಸುವ ಮೂಲಕ ದೇಶವನ್ನು ಸರ್ವನಾಶದತ್ತ ಒಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಕಳೆದ ಐದೂವರೆ ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಜನರಲ್ಲಿ ಸಾಕಷ್ಟು ಆಸೆ ಹುಟ್ಟಿಸಿದ್ದವರು ಇಂದು ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ ಅವರು, ಆಪರೇಷನ್ ಕಮಲ ಮೂಲಕ ಮೈತ್ರಿ ಸರ್ಕಾರ ಪತನಗೊಳಿಸಿರುವುದನ್ನು ವಿರೋಧಿಸಿ ನವೆಂಬರ್ 4ರಂದು ಮುಂಡಗೋಡ, 5 ಶಿವಮೊಗ್ಗ, 7 ಹಾಸನ, 11 ಬೆಂಗಳೂರು, 12 ವಿಜಯಪುರ, 13 ರಾಯಚೂರು ಹಾಗೂ 14 ಚಿತ್ರದುರ್ಗ ಸೇರಿದಂತೆ ಇನ್ನಿತರ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.