ನವದೆಹಲಿ, ನ.04(Daijiworld News/SS): ಅಯೋಧ್ಯಾ ರಾಮ ಜನ್ಮ ಭೂಮಿ ವಿವಾದಿತ ಪ್ರದೇಶದ ಮಾಲಿಕತ್ವದ ಕುರಿತು ಸುಪ್ರೀಂಕೋರ್ಟ್ ತೀರ್ಪು ನ. 17ರಂದು ಹೊರಬೀಳುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶ ಸೇರಿದಂತೆ ರಾಜ್ಯದೆಲ್ಲೆಡೆ ನಿಗಾ ವಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.
ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಉಭಯ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ. ಆದರೆ ಕೆಲವು ಕಿಡಿಕೇಡಿಗಳಿಂದ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆ ಇದೆ. ಅಂತಹವರ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನೂ ಕೂಡಾ ಪರಿಶೀಲಿಸಲಾಗುತ್ತಿದೆ. ಇವುಗಳೇ ಭದ್ರತಾ ಏಜೆನ್ಸಿಗಳಿಗೆ ದೊಡ್ಡ ಸವಾಲಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಅವರಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗುವುದು. ಸುಪ್ರೀಂಕೋರ್ಟ್ ತೀರ್ಪು ಹೇಗೆ ಬಂದರೂ ಸ್ವಾಗತಿಸುವುದಾಗಿ ಅವರು ಕೂಡಾ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸಿಜೆಐ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠವು ತೀರ್ಪು ಪ್ರಕಟಿಸಲಿದೆ. ಅಯೋಧ್ಯೆ ತೀರ್ಪಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗುಪ್ತಚರ ವರದಿ ಅಥವಾ ನಿರ್ದಿಷ್ಠ ಆಲರ್ಟ್ ಬಂದಿಲ್ಲ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.