ಬೆಂಗಳೂರು, ನ.04(Daijiworld News/SS): ಅನರ್ಹ ಶಾಸಕರು ಮಾತನಾಡುತ್ತಿಲ್ಲ. ಒಂದೇ ವೇಳೆ ಅವರು ಬಾಯಿ ಬಿಟ್ಟರೆ, ಬಾಂಬ್ ಸ್ಫೋಟಗೊಳ್ಳುತ್ತದೆ. 14 ತಿಂಗಳ ಮೈತ್ರಿ ಸರ್ಕಾರ ಕುಸಿತು ಬೀಳಲು ಕಾರಣ, ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು..? ಎಷ್ಟು ಬಾರಿ ಸಭೆಯಾಗಿದೆ ಎಂಬುದೆಲ್ಲಾ ಹೊರಗೆ ಬರುತ್ತವೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ಈ ಹಿಂದೆ ಮೈತ್ರಿ ಸರ್ಕಾರವಿದ್ದ ವೇಳೆ ಒಮ್ಮೆ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡುವಂತೆ ನಾನು ಶಿಫಾರಸು ಮಾಡಿದ್ದೆ. ಆದರೆ ಅದು ಯಶಸ್ವಿಯಾಗಿರಲಿಲ್ಲ. ಇದನ್ನು ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನೇ ಶಿಫಾರಸು ಮಾಡಿದರು ಕುಮಾರಸ್ವಾಮಿ ಒಪ್ಪುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದರು. ಶಾಸಕರಿಗೆ ಕಾಂಗ್ರೆಸ್'ನಲ್ಲಿ ಗೌರವವಿಲ್ಲ ಅಂತಾ ತಿಳಿಸಿದ್ದರು ಎಂದು ಹೇಳಿದರು.
ಎಂಟಿಬಿ ನಾಗರಾಜ್ ಅವರೂ ಕೂಡ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಕೆಲವೊಮ್ಮೆ ಸಿದ್ದರಾಮಯ್ಯ ಅವರೂ ಕೂಡ ಇದನ್ನು ಒಪ್ಪಿಕೊಂಡಿದ್ದರು. ತಾವೇ ಸ್ವತಃ ವರ್ಗಾವಣೆಗೆ ಶಿಫಾರಸು ಮಾಡಿದ್ದರು. ಅದನ್ನು ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಒಪ್ಪಿರಲಿಲ್ಲ. ಈ ಸತ್ಯವನ್ನು ಸಿದ್ದರಾಮಯ್ಯ ಅಲ್ಲಗೆಳೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.