ನವದೆಹಲಿ, ನ 04 (Daijiworld News/MSP): ಭಾರತದಲ್ಲಿ ಬಹು ನಿರೀಕ್ಷಿತ ವಾಟ್ಸಾಪ್ ಪೇ ಶೀಘ್ರದಲ್ಲೇ ಭಾರತದಲ್ಲಿ ದೊರೆಯಲಿದೆ ಎಂದು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಹೇಳಿದ್ದಾರೆ.
ವಾಟ್ಸಾಪ್ ಪೇ ಪರೀಕ್ಷಾ ಹಂತ ಈಗಾಗಲೇ ಯಶಸ್ವಿಯಾಗಿದ್ದು , ಡೇಟಾ ಮತ್ತು ನಿಯಂತ್ರಣಾ ಪ್ರಾಧಿಕಾರಗಳ ನಿಯಮಗಳಿಂದಾಗಿ ಲಾಂಚ್ ಮಾಡುವುದು ಸ್ವಲ್ಪಮಟ್ಟಿಗೆ ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.
" ಈ ಸೇವೆಯನ್ನು ಪಡೆಯಲು ಬಹಳಷ್ಟು ಜನರು ಉತ್ಸುಕರಾಗಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಭಾರತದಲ್ಲಿ ಈ ಸೇವೆ ಶೀಘ್ರದಲ್ಲೇ ಪ್ರಾರಂಭಿಸುವ ಆಶಾವಾದ ಹೊಂದಿದ್ದೇವೆ" ಎಂದು ಮಾರ್ಕ್ ಝುಕರ್ಬರ್ಗ್ ಪ್ರತಿಕ್ರಿಯಿಸಿದ್ದಾರೆ.
" ವಾಟ್ಸಪ್ ಪೇ " ಎನ್ನುವುದು ಯುಪಿಐ ಆಧಾರಿತ ಪೇಮೆಂಟ್ ಸೇವೆಯಾಗಿದೆ, ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಹಣವನ್ನು ವರ್ಗಾಯಿಸಬಹುದಾಗಿದೆ.ಭಾರತದಲ್ಲಿ ಈಗಾಗಲೇ ಹಲವು ಡಿಜಿಟಲ್ UPI ಪೇಮೆಂಟ್ ಆಪ್ಸ್ಗಳು ಲಗ್ಗೆ ಇಟ್ಟಿದ್ದು, ಎಲ್ಲ ಆಪ್ಗಳು ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್ಗಳನ್ನು ನೀಡಿವೆ. ಒಂದು ವೇಳೆ ವಾಟ್ಸಪ್ ಪೇ ಸೇವೆ ಭಾರತಕ್ಕೆ ಕಾಲಿಟ್ಟರೆ ಈಗಾಗಲೇ ಇದೇ ಸೇವೆ ನೀಡುತ್ತಿರುವ ಗೂಗಲ್ ಪೇ, ಫೋನ್ಪೇ, ಪೇಟಿಎಮ್, ಅಮೆಜಾನ್ ಪೇ, ಭಾರತ್ ಪೇ, ಮುಂತಾದ ಆ್ಯಪ್ ಗಳಿಗೆ ತೀವ್ರ ಪೈಪೋಟಿಯೊಡ್ಡುವ ಸಾಧ್ಯತೆ ಇದೆ.