ಬೆಂಗಳೂರು, ನ 04 (Daijiworld News/MB) : ಬಿಜೆಪಿ ಸಭೆಯಲ್ಲಿ ಸಿ.ಎಂ ಯಡಿಯೂರಪ್ಪ ಆಡಿದ್ದಾರೆ ಎನ್ನಲಾದ ವೈರಲ್ ಆದ ವಿಡಿಯೋವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ, ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿರುವಾಗ ಬೆನ್ನಲ್ಲೇ, ಇತ್ತ 'ವಿಡಿಯೋ ಮಾಡಿದವರು ಯಾರು'? ಎಂದು ತಿಳಿಯದ ಬಿಜೆಪಿ ಪಕ್ಷವೂ ಏಳು ಜನರ ತನಿಖಾ ಸಮಿತಿ ರಚಿಸಿ ಆಂತರಿಕ ತನಿಖೆ ನಡೆಸಲು ಮುಂದಾಗಿದೆ.
ಕಾಂಗ್ರೆಸ್ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದು, ಬಿಜೆಪಿ ಹೈಕಮಾಂಡ್ ಆಡಿಯೋ ಮತ್ತು ವಿಡಿಯೋಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಅತೀ ಶೀಘ್ರವಾಗಿ ತಮ್ಮೊಳಗೆ ಇರುವ ಹಿತ ಶತ್ರುಗಳನ್ನು ಪತ್ತೆ ಹಚ್ಚಲು ಬಿಜೆಪಿ ಹೊರಟಿದೆ.
ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳ ಮುಖಂಡರು ಮತ್ತು ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದು, ರಚನೆಯಾಗಿರುವ ಈ ಏಳು ಜನರ ತಂಡ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ತಂಡ ಗೋಕಾಕ್, ಕಾಗವಾಡ, ಅಥಣಿ, ಹಿರೇಕೆರೂರು, ವಿಜಯನಗರ, ಯಲ್ಲಾಪುರ ಮತ್ತು ರಾಣೆಬೆನ್ನೂರು ಕ್ಷೇತ್ರಗಳ ಮುಖಂಡರ ಮೇಲೆ ರಹಸ್ಯವಾಗಿ ತನಿಖೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸೇರಿದ ಏಳು ಜನರ ಆಂತರಿಕ ತನಿಖಾ ತಂಡ ಹೋಟೆಲ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಮುಂದಾಗಿದೆ. ಸಭೆಯಲ್ಲಿ ಪಕ್ಷದ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರದರೂ ಭಾಗಿಯಾಗಿದ್ದಾರಾ? ಎಂಬ ಪ್ರಶ್ನೆಯು ಎದ್ದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ತಮ್ಮನ್ನು ವಿಡಿಯೋ ಮಾಡಿದ ತಂಡದವರೆಂದು ಗುರುತಿಸಿ, ಪಕ್ಷದಿಂದ ಉಚ್ಛಾಟಿಸಿ ಯಾವುದೇ ಸ್ಥಾನ ನೀಡದಿದ್ದರೆ ನಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಉಂಟಾಗಬಹುದು ಎಂಬ ಭಯ ಕಾಡುತ್ತಿದೆ.
ತನಿಖೆ ನಡೆಯುವಾಗ ದೊರೆತ ಎಲ್ಲಾ ಮಾಹಿತಿಗಳನ್ನು ಯಡಿಯೂರಪ್ಪ ನಳಿನ್ ಕುಮಾರ್ ಕಟೀಲ್ ಅವರಿಗೆ ನೀಡಲಿದ್ದಾರೆ. ಕಾಂಗ್ರೆಸ್ ಮಾತ್ರ ತನಗೆ ದೊರೆತ ಸಾಕ್ಷಿಯಿಂದ ರಾಜ್ಯಪಾಲರ ಮೊರೆ ಹೋಗಲು ಹೊರಟಿದೆ.