ಮಂಗಳೂರು, ನ 04 (Daijiworld News/MB) : ‘ಕ್ಯಾರ್’ ಹಾಗೂ ‘ಮಹಾ’ ಚಂಡಮಾರುತಗಳ ಭೀತಿ ಮರೆಯಾಗುವ ಮುನ್ನವೇ ಮತ್ತೊಮ್ಮೆ ಚಂಡಮಾರುತ ಸೃಷ್ಟಿಯಾಗುವ ಭೀತಿ ಉಂಟಾಗಿದೆ. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತ ಈಗಾಗಲೇ ಕರಾವಳಿಯಲ್ಲಿ ತೀವ್ರ ಪರಿಣಾಮ ಉಂಟು ಮಾಡಿತ್ತು. ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತ ಕಾಣಿಸಿಕೊಳ್ಳಲಿದೆ.
ಅಂಡಮಾನ್ ದ್ವೀಪಗಳ ಸಮೀಪ ಒತ್ತಡ ಸೃಷ್ಟಿಯಾಗಿ ಆ ನಂತರ ಎರಡು ದಿನಗಳಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಇದು ಚಂಡಮಾರುತದ ಸ್ವರೂಪ ಪಡೆದು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದಾಗಿ ನವೆಂಬರ್ 6ರ ನಂತರ ರಾಜ್ಯದಲ್ಲಿ ಮತ್ತೆ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರ ಪರಿಣಾಮವಾಗಿ ದಕ್ಷಿಣ ಭಾರತದ ವಿವಿಧೆಡೆ ಉತ್ತಮ ಮಳೆಯಾಗಲಿದೆ. ಈಗಿನ ಮುನ್ಸೂಚನೆ ಪ್ರಕಾರ ಅದು ನವೆಂಬರ್ ಹತ್ತರಂದು ಪಾರಾದೀಪ್ ಕರಾವಳಿಗೆ ತಲುಪುವ ಸಾಧ್ಯತೆ ಇದೆ.
ಇನ್ನೊಂದೆಡೆ ಮಹಾ ಚಂಡಮಾರುತವು 580 ಕಿ.ಮೀ. ದೂರ ಸಮುದ್ರದಲ್ಲಿದ್ದು, ಒಮನ್ ಕಡೆ ಸಾಗುತ್ತಿರುವ ಹಾದಿಯಿಂದ ತಿರುವು ಪಡೆದು ಗುಜರಾತ್ ಕಡೆಗೆ ದಿಕ್ಕು ಬದಲಾಯಿಸಿದೆ. ನವೆಂಬರ್ 6 ರ ಮಧ್ಯರಾತ್ರಿ ಗುಜರಾತ್ ನ ದ್ವಾರಕ ಕಿನಾರೆಗೆ ಅಪ್ಪಲಿಸುವ ಪರಿಣಾಮ ಗುಜರಾತ್ ನಲ್ಲಿ ಹಾಗೂ ಸೌರಾಷ್ಟ್ರಗಳಲ್ಲಿ ತೀವ್ರ ಮಳೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
'ಮೀನುಗಾರರಿಗೆ ಈಗಾಗಲೇ ನೀರಿಗೆ ಇಳಿಯದಂತೆ ಎಚ್ಚರಿಸಲಾಗಿದೆ. ಬಂದರುಗಳಲ್ಲಿ ಎಚ್ಚರಿಕೆ ಬಾವುಟ ಹಾರಿಸಲಾಗಿದೆ’ ಎಂದು ಗುಜರಾತ್ ನ ಅಧಿಕಾರಿಗಳು ತಿಳಿಸಿದ್ದಾರೆ.