ಹರ್ಯಾಣ, ನ 04 (Daijiworld News/MSP): ಕೊಳವೆ ಬಾವಿಗೆ ಬಿದ್ದ ಬಾಲಕಿಯನ್ನು ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ)ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಹೊರತೆಗೆದ ಬಳಿಕ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಹರ್ಯಾಣದ ಕರ್ನಾಲ್ ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಶಿವಾನಿ (5) ಎಂದು ಗುರುತಿಸಲಾಗಿದೆ. ಮನೆ ಮುಂದೆ ಆಡುತ್ತಿದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಶಿವಾನಿ 50-60 ಅಡಿ ಆಳದ ಕೊಳವೆಬಾವಿಗೆ ಬಿದ್ದಿರುವುದು ಪೋಷಕರು ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ ೯.೩೦ ರ ಸುಮಾರಿಗೆ ಸತತ ಶ್ರಮದಿಂದ ಹರಸಾಹಸ ಪಟ್ಟು 10 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆ ಬಳಿಕ ಎನ್ಡಿಆರ್ಎಫ್ ತಂಡ ಬಾಲಕಿಯನ್ನು ಜೀವಂತವಾಗಿ ಹೊರತೆಗೆದಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಕೊಳವೆ ಬಾವಿಯಲ್ಲಿ ಬಿದ್ದ ಪರಿಣಾಮ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಳು ಎಂದು ವೈದ್ಯರು ಘೋಷಿಸಿದ್ದಾರೆ.
ಈ ಬಗ್ಗೆ ಹರ್ಯಾಣ ಸಿಎಂ ಟ್ವೀಟ್ ಮಾಡಿ ಬಾಲಕಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಘರೌಂಡಾದ ಶಾಸಕ ಹರ್ವಿಂದರ್ ಕಲ್ಯಾಣ್ ಅವರು ಕೊಳವೆ ಬಾವಿಯನ್ನು ಮುಕ್ತವಾಗಿ ತೆರೆದಿಟ್ಟ ಬಗ್ಗೆ ಕುಟುಂಬದ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.