ನವದೆಹಲಿ, ನ 04 (Daijiworld News/MB) : 'ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿಯೇ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ವಿಷಯದಲ್ಲಿ ನನಗೆ ವಿಶ್ವಾಸವಿದೆ’ ಎಂದು ಸೋಮವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಹಂಗಾಮಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣೆ ಫಲಿತಾಂಶ ಬಂದು ಹತ್ತು ದಿನಗಳಾದರೂ ಸರಕಾರ ರಚನೆಯ ವಿಷಯದಲ್ಲಿ ಬಿಜೆಪಿ ಮತ್ತು ಶಿವಸೇನೆಯ ನಡುವೆ ಗೊಂದಲ ಮುಂದುವರೆದಿರುವಾಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
‘ಹಲವಾರು ಜನರು ಮಾತನಾಡುತ್ತಿದ್ದಾರೆ. ಆದರೆ ನಾನು ಬಿಜೆಪಿಯ ಕುರಿತು ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ. ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿಯೇ ಬಿಜೆಪಿ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ವಿಷಯದಲ್ಲಿ ನನಗೆ ವಿಶ್ವಾಸವಿದೆ’ ಎಂದು ಶಾ ಮತ್ತು ಅವರ ನಡುವಿನ ಮಾತುಕತೆ ನಡೆದ ನಂತರ ಸರಕಾರ ರಚನೆಗೆ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಫಡ್ನವೀಸ್ ಹೇಳಿದರು.
ಈ ಸಂದರ್ಭದಲ್ಲಿ ‘ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಭಾರೀ ನಷ್ಟ ಉಂಟಾಗಿದೆ, ಹಾಗಾಗಿ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತು ಶಾರೊಂದಿಗೆ ಚರ್ಚಿಸಲು ದೆಹಲಿಗೆ ಬಂದಿದ್ದು, ಮಳೆಯಿಂದ ನಷ್ಟ ಸಂಕಷ್ಟಕ್ಕೊಳಾಗಾದ ರೈತರಿಗೆ 10 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಲು ಅನುಮತಿಯನ್ನು ಈಗಾಗಲೇ ನೀಡಲಾಗಿದೆ. ನಮ್ಮ ಸರ್ಕಾರ ಎಂದಿಗೂ ರೈತರ ಬೆಂಬಲಕ್ಕೆ ನಿಲ್ಲುತ್ತದೆ’ ಎಂದು ಅವರು ಹೇಳಿದರು.
ಈ ನಡುವೆ ಶಿವಸೇನೆ ಮತ್ತು ಎನ್ಸಿಪಿ ಜೊತೆ ಸೇರಿ ಸರಕಾರ ರಚಿಸುವ ಮಾತು ಕೇಳಿ ಬರುತ್ತಿದೆ.