ಚಿಕ್ಕಮಗಳೂರು, ನ 04 (Daijiworld News/MB) :ಪಾಸ್ ಪೋರ್ಟ್ ವೆರಿಫಿಕೇಶನ್ ಮಾಡಲೆಂದು ತಂದೆಯ ಜೊತೆ ತೆರಳಿದ್ದ ಯುವತಿ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಟಿಪ್ಪು ನಗರದಲ್ಲಿ ನಡೆದಿದೆ.
ಮೃತ ಪಟ್ಟ ಯುವತಿ ಸಿಂಧೂಜಾ (23) ಎಂದು ತಿಳಿದುಬಂದಿದೆ. ಇಂಜಿನಿಯರಿಂಗ್ ಮುಗಿಸಿದ ಸಿಂಧೂಜಾಗೆ ವಿದೇಶದಲ್ಲಿ ಉದ್ಯೋಗ ದೊರೆತಿದ್ದು ಪಾಸ್ ಪೋರ್ಟ್ಗೆ ಅರ್ಜಿ ಮಾಡಿ ಅದರ ವೆರಿಫಿಕೇಶನಿಗೆಂದು ತಂದೆಯ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದಂಡರಮಕ್ಕಿ ಸಮೀಪದಲ್ಲಿನ ರಸ್ತೆಯಲ್ಲಿದ್ದ ದೊಡ್ಡ ಗಾತ್ರದ ಗುಂಡಿಯನ್ನು ಗಮನಿಸದೆ ಹೋಗಿದ್ದರಿಂದ ಬೈಕ್ ಗುಂಡಿಗೆ ಇಳಿದಾಗ, ಸಿಂಧೂಜಾ ಬಿದ್ದು ಗಂಭೀರ ಗಾಯಗೊಂಡಿದ್ದರು. ತಲೆಗೆ ತೀವ್ರ ಗಾಯವಾಗಿದ್ದ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲೆ ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದ ಕಾರಣ ಅವರು ಸಾವನ್ನಪ್ಪಿದ್ದಾರೆ.
ಮೃತ ಯುವತಿಯ ತಂದೆ ರಸ್ತೆ ಸರಿಯಿಲ್ಲದೆ ನನ್ನ ಮಗಳು ಸಾವು ಸಂಭವಿಸಿದೆ ಎಂದು ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯ ಸಾವಿನ ಬಳಿಕ ಹಲವು ಸಂಘಟನೆಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ರಸ್ತೆ ಗುಂಡಿ ಮುಚ್ಚದ ಸರ್ಕಾರಿ ಸಿಬ್ಬಂದಿಗಳ ವಿರುದ್ಧ ಆಕ್ರೋಶದ ಮಾತುಗಳು ಎದ್ದಿದೆ.