ಮುಝಫರ್ಪುರ, ಅ.12 (DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ಆಕಾಂಕ್ಷಿಗಳು ಸ್ಪರ್ಧಿಸುತ್ತಾರೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟಸಾಧ್ಯ. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 28ನೇ ರ್ಯಾಂಕ್ ಪಡೆದ ಪ್ರಾಚಿ ಹನಿ ಅವರ ಯಶೋಗಾಥೆ ಇದು.

ಬಿಹಾರದ ಮುಝಫರ್ಪುರ ಜಿಲ್ಲೆಯ ನಿವಾಸಿಯಾಗಿರುವ ಪ್ರಾಚಿ ಅವರ ತಂದೆ ಶಾಲಾ ಪ್ರಾಂಶುಪಾಲರಾಗಿ ಮತ್ತು ತಾಯಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಶಿಕ್ಷಣಕ್ಕೆ ಯಾವಾಗಲೂ ಮೊದಲ ಆದ್ಯತೆ ಇತ್ತು. ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ತಂದೆಯ ಈಡೇರದ ಕನಸನ್ನು ಕೇಳುತ್ತಲೇ ಬೆಳೆದ ಪ್ರಾಚಿ, ಅದೇ ತನ್ನ ಜೀವನದ ಗುರಿಯಾಗಿಸಿಕೊಂಡರು.
ಮುಝಫರ್ಪುರದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದ ಪ್ರಾಚಿ ಅವರು, ದೆಹಲಿ ವಿಶ್ವವಿದ್ಯಾಲಯದ ಕಾಳಿದಿ ಕಾಲೇಜಿನಲ್ಲಿ ಭೂಗೋಳಶಾಸ್ತ್ರದಲ್ಲಿ ಪದವಿ ಪಡೆದರು. ಕಾಲೇಜು ದಿನಗಳಲ್ಲೇ ಯುಪಿಎಸ್ಸಿ ತಯಾರಿ ಆರಂಭಿಸಿದ ಅವರು, ಭೂಗೋಳಶಾಸ್ತ್ರವನ್ನೇ ತಮ್ಮ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡರು.
ಆದರೆ ಪ್ರಾಚಿ ಅವರು ತಮ್ಮ ಮೊದಲ ಮೂರು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. 2025ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 28ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.