ನವದೆಹಲಿ, ಅ.12 (DaijiworldNews/AK): ಮತಗಳ್ಳತನದ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿ ಒಕ್ಕೂಟದ ನಾಯಕರು ಇಂದು ಸುಪ್ರೀಂ ಕೋರ್ಟ್ನತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯನ್ನು ಕೋಟೆಯಂತೆ ಮಾಡಲಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವ ಜನರನ್ನು ರೈಲು ಮತ್ತು ಬಸ್ಗಳಲ್ಲಿ ತಡೆಯಲಾಗುತ್ತಿದೆ. ರಾಜಧಾನಿಯನ್ನು ಜೈಲಿನಂತೆ ಮಾಡಲಾಗಿದೆ ಎಂದು ಅವರು ಟೀಕಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಗಂಭೀರ ಕಳವಳವಿದೆ ಎಂದು ಹೇಳಿದ ರಾಹುಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ತಾವು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾಗಿ ತಿಳಿಸಿದರು. ಇಂದು ಇಂಡಿ ಒಕ್ಕೂಟದ ನಾಯಕರು ಸುಪ್ರೀಂ ಕೋರ್ಟ್ಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ ಎಂದರು.
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ತಡೆ, ಮತಗಳ್ಳತನದ ಆರೋಪಗಳ ಪರಿಶೀಲನೆ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಗಳಾಗಿವೆ. ಆದರೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿರೋಧ ಪಕ್ಷದ ನಾಯಕರ ಭೇಟಿಯ ಮನವಿಯನ್ನು ನಿರಾಕರಿಸಿದ್ದು, ವಿಷಯವನ್ನು ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಮುಂದುವರಿಸುವಂತೆ ಸೂಚಿಸಿದ್ದಾರೆ.
“ಬೀದಿಗಳಲ್ಲಿ 20,000 ರಿಂದ 30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಸರ್ಕಾರ ದೊಡ್ಡ ತಪ್ಪು ಮಾಡುತ್ತಿದೆ. ಮೋದಿ ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಎಷ್ಟು ಪ್ರಯತ್ನಿಸುತ್ತದೆಯೋ, ಅಷ್ಟೇ ವೇಗವಾಗಿ ನಾವು ಆತನ ಹಿಂದಿರುವ ಅಸಲಿ ನಿಯಂತ್ರಕರನ್ನುತಲುಪಲಿದ್ದೇವೆ. ಆರ್ಎಸ್ಎಸ್ ಕಾರ್ಯಕರ್ತರಿಗೆ ಮುಕ್ತ ಸ್ವಾತಂತ್ರ್ಯ ನೀಡಿ, ಯುವ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಲು ಪೊಲೀಸರಿಗೆ ಆದೇಶ ನೀಡಲಾಗುತ್ತಿರುವುದರಿಂದ ಭದ್ರತಾ ಸಿಬ್ಬಂದಿಯೇ ಅಸಮಾಧಾನಗೊಂಡಿದ್ದಾರೆ” ಎಂದು ಆರೋಪಿಸಿದರು.