ಬೆಂಗಳೂರು, ನ.05(Daijiworld News/SS): ಅನರ್ಹ ಶಾಸಕರ ಕುರಿತಂತೆ ಸಿಎಂ ಯಡಿಯೂರಪ್ಪನವರ ಧ್ವನಿಯೆಂದು ಹೇಳಲಾದ ವಿಡಿಯೋ ಬಗ್ಗೆ ವಿಚಾರಣೆ ನಡೆಸಬೇಕೆಂಬ ಕಾಂಗ್ರೆಸ್ ಪರ ವಕೀಲರ ಬೇಡಿಕೆಯನ್ನು ಪುರಸ್ಕರಿಸಿರುವ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಅನರ್ಹ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದು, ನಂತರ ರಾಜೀನಾಮೆ ನೀಡಿದ್ದು ಎಲ್ಲವೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಗೊತ್ತಿತ್ತು ಎಂಬೆಲ್ಲ ವಿಚಾರಗಳ ಬಗ್ಗೆ ಯಡಿಯೂರಪ್ಪನವರು ಮಾತನಾಡಿದ್ದಾರೆನ್ನುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು.
ಇದೀಗ ಈ ವಿಡಿಯೋವನ್ನು ಸಿ.ಡಿ. ಮೂಲಕ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಕಾಂಗ್ರೆಸ್-ಜೆಡಿಎಸ್, ಸದರಿ ಪ್ರಕರಣದಲ್ಲಿ ನಾವು ಇದುವರೆಗೆ ಮಾಡಿರುವ ವಾದಗಳಿಗೆ ಪುಷ್ಟಿ ನೀಡುವ ಪ್ರಬಲ ದಾಖಲೆ ಸಿಕ್ಕಂತಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡಬೇಕು ಎಂದು ಅರ್ಜಿ ಸಲ್ಲಿಸಿವೆ. ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾ.ಎನ್. ವಿ. ರಮಣ ನೇತೃತ್ವದ ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾ.ರಮಣ, ‘ಇವೆಲ್ಲಾ ಸಾರ್ವಜನಿಕ ಜೀವನದಲ್ಲಿ ಸಹಜವಲ್ಲವೇ? ಜನಪ್ರತಿನಿಧಿಯಾಗಿ ನಿಮಗೂ ಈ ಬಗ್ಗೆ ತಿಳಿದಿರಬೇಕು. ಇದನ್ನೆಲ್ಲ ನೀವು ಗಂಭೀರವಾಗಿ ಪರಿಗಣಿಸುತ್ತೀರಾ?’ ಎಂದು ಪ್ರಶ್ನಿಸಿದರು. ಇಂದೇ ವಿಚಾರಣೆ ನಡೆಯಬೇಕು ಎಂದು ಸಿಬಲ್ ಒತ್ತಾಯಕ್ಕೆ ಸಾಧ್ಯವಿಲ್ಲ ಎಂದ ನ್ಯಾ.ರಮಣ, ಮಂಗಳವಾರ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದರು. ಹೀಗಾಗಿ, ಮಂಗಳವಾರ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲು ತೀರ್ಮಾನಿಸಿದೆ.