ಉತ್ತರಪ್ರದೇಶ, ನ.05(Daijiworld News/SS): ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಕಟ್ಟಡ ವಿವಾದ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನ. 17ರೊಳಗೆ ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನಲೆ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗಿದೆ.
ಯಾವುದೇ ಧರ್ಮ, ದೇವರಿಗೆ ಅವಮಾನವಾಗುವ ಸಂದೇಶಗಳನ್ನು ವಾಟ್ಸ್ಆಪ್, ಟ್ವಿಟ್ಟರ್, ಟೆಲಿಗ್ರಾಂ, ಇನ್ಸ್ಟಾಗ್ರಾಮ್ಂಥ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಬಾರದು ಎಂದು ಉತ್ತರ ಪ್ರದೇಶ ಸರ್ಕಾರ ತಾಕೀತು ಮಾಡಿದೆ. ಅಯೋಧ್ಯೆ ಜಿಲ್ಲೆಯ ಜನರಿಗೆ ಈ ನಿಷೇಧ ಅನ್ವಯ. ಈ ಅವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಚರ್ಚೆ ಆಯೋಜಿಸಬಾರದು ಎಂದು ಸೂಚಿಸಿದೆ.
ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಅ. 31ರಂದು ಹೊರಡಿಸಿರುವ ಆದೇಶ ಡಿ. 28ರ ವರೆಗೆ ಜಾರಿಯಲ್ಲಿರುತ್ತದೆ. ಉಲ್ಲಂಘಿಸಿದವರ ವಿರುದ್ಧ ಐಪಿಸಿ 188ನೇ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ. ಈ ಅವಧಿಯಲ್ಲಿ ಛತ್ ಪೂಜೆ, ಕಾರ್ತಿಕ ಪೂರ್ಣಿಮೆ, ಪಂಚಕೋಸಿ ಪರಿಕ್ರಮ, ಚೌಧರಿ ಚರಣ್ ಸಿಂಗ್ ಜನ್ಮ ದಿನ, ಗುರು ನಾನಕ್ ಜಯಂತಿ, ಗುರು ತೇಜ್ ಬಹಾದೂರ್ ಹುತಾತ್ಮ ದಿನ, ಈದ್ ಉಲ್ ಮಿಲಾದ್, ಮತ್ತು ಕ್ರಿಸ್ವುಸ್ ಆಚರಣೆ ಇರುವುದರಿಂದ ನಿಷೇಧ ಹೇರಲಾಗಿದೆ.
ಇನ್ನೂ ದುಷ್ಕೃತ್ಯದಲ್ಲಿ ತೊಡಗುವ ಶಕ್ತಿಗಳ ವಿರುದ್ಧ ಅಗತ್ಯಬಿದ್ದರೆ ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಉತ್ತರಪ್ರದೇಶ ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಎಚ್ಚರಿಸಿದ್ದಾರೆ.