ನವದೆಹಲಿ, ನ 05 (Daijiworld News/MB) : ದೇಶದ ರೈತರಿಗೆ, ವ್ಯಾಪಾರ, ಕೈಗಾರಿಕೆಗಳ ಮೇಲೆ ದುಷ್ಪರಿಣಾಮ ಬೀರಲಿದ್ದ 'ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ’ (ಆರ್ಸಿಇಪಿ) ಒಪ್ಪಂದದಿಂದ ಹಿಂಜರೆಯುವ ಮುಖಾಂತರ ಭಾರತ ದೇಶದ ರೈತ, ಕಾರ್ಮಿಕ ವರ್ಗಕ್ಕೆ ಸಂತಸ ನೀಡಿದೆ. ಈ ಮುಕ್ತ ವ್ಯಾಪಾರದ ಒಪ್ಪಂದದಿಂದಾಗಿ ಆಗಲಿರುವ ದುಷ್ಪರಿಣಾಮವನ್ನು ವಿರೋಧಿಸಿ ಧ್ವನಿ ಎತ್ತಿದ ರೈತರಲ್ಲಿದ್ದ ಆತಂಕವನ್ನು ಸರಕಾರ ಒಪ್ಪಂದ ತಿರಸ್ಕರಿಸುವ ಮುಖಾಂತರ ದೂರ ಮಾಡಿದೆ.
'ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ’ (ಆರ್ಸಿಇಪಿ) ಒಪ್ಪಂದಲ್ಲಿರುವ ಸುಂಕ ರಹಿತ ವ್ಯಾಪರದಿಂದ ಭಾರತದ ಆರ್ಥಿಕ ಪರಿಸ್ಥಿತಿಗೆ ಪೆಟ್ಟಾಗುತ್ತದೆ. ಆದ್ದರಿಂದ ಕೆಲವು ಸರಕುಗಳ ಮೇಲಾದರೂ ಸುಂಕ ವಿಧಿಸಬೇಕು ಎಂಬ ಭಾರತದ ಅಭಿಪ್ರಾಯಕ್ಕೆ ಸಹಮತ ನೀಡದ ಆ ಹಿನ್ನಲೆಯಲ್ಲಿ ಭಾರತ ಆರ್ಸಿಇಪಿ ಒಪ್ಪಂದವನ್ನು ತಿರಸ್ಕರಿಸಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 'ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಯವರು ತೆಗೆದುಕೊಂಡ ಈ ನಿರ್ಧಾರ ಸ್ವಾಗತಾರ್ಹ. ಇದರಿಂದಾಗಿ ರೈತರು, ಸಣ್ಣ-ಮಧ್ಯಮ ಉದ್ಯಮಗಳು, ಹೈನುಗಾರಿಕೆ, ಉಕ್ಕು, ಔಷಧ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಸಹಾಯವಾಗಲಿದೆ. ಮೋದಿಯವರ ಬಲಿಷ್ಟ ನಾಯಕತ್ವ ಗುಣ ಮತ್ತು ಯಾವುದೇ ಸಂದರ್ಭದಲ್ಲಿ ದೇಶದ ಹಿತಾಸಕ್ತಿ ಕಾಪಾಡುವ ದೃಢ ನಿಲುವಿನ ಪರಿಣಾಮ ಈ ನಿರ್ಧಾರ ತಳೆದಿದ್ದಾರೆ’ ಎಂದು ಹೇಳಿದರು.
ಈ ಒಪ್ಪಂದದ ವಿಚಾರದಲ್ಲಿ ಭಾರತದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿತ್ತು. ಈ ಒಪ್ಪಂದದ ವಿರುದ್ಧ ರೈತರು, ಹಾಗೆಯೇ ವಿರೋಧ ಪಕ್ಷವು ಈ ಒಪ್ಪಂದಕ್ಕೆ ಸಹಿ ಹಾಕದಂತೆ ಮೋದಿಯವರಿಗೆ ಹೇಳಿದ್ದರು.
'ಭಾರತದ ಆರ್ಥಿಕತೆಗೆ ಕೊಡುಗೆ ನೀಡುವ ಕಾರ್ಮಿಕರು ಮತ್ತು ಬಳಕೆದಾರರೂ ಕೂಡಾ ದೇಶಕ್ಕೆ ಅತೀ ಮುಖ್ಯ. ಅವರ ಹಿತಾಸಕ್ತಿಯನ್ನು ಕಾಪಾಡುವುದು ಕೂಡಾ ಮುಖ್ಯ. ಆದ್ದರಿಂದ ಒಪ್ಪಂದಕ್ಕೆ ಅನುಮತಿ ನೀಡಲು ನನ್ನ ಮನಸ್ಸು ಒಪ್ಪಲಿಲ್ಲ’ಎಂದು ಪ್ರಧಾನಿ ಮೋದಿಯವರಲ್ಲಿ ವಿನಂತಿಸಿದರು.
ಭಾರತದ ಈ ನಿಲುವಿನ ಕುರಿತು ಮಾತಾನಾಡಿದ, ಎಐಸಿಸಿ ಸಂಪರ್ಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ‘ಕಾಂಗ್ರೆಸ್ ಒತ್ತಡಕ್ಕೆ ಮಣಿದು ಸರಕಾರ ಈ ನಿರ್ಧಾರ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಚೀನಾ ಮಾತ್ರ ಭಾರತವಿಲ್ಲದೆ ಒಪ್ಪಂದ ಮುಂದುವರೆಸಲು ತಯಾರಾಗಿದೆ. 10 ಏಸಿಯಾನ್ ರಾಷ್ಟ್ರಗಳು ಮತ್ತು ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿ ನಡೆಸಿದ ಶೃಂಗ ಸಭೆಯಲ್ಲಿ ನಡೆದ ಚರ್ಚೆಯಂತೆ ಭಾರತವನ್ನು ಹೊರತು ಪಡಿಸಿ ಉಳಿದ ಹದಿನೈದು ರಾಷ್ಟ್ರಗಳು ಸಹಮತಕ್ಕೆ ಬಂದಿದೆ. ಆದ್ದರಿಂದ ಮುಂದಿನ ವರ್ಷ ವಿಯೆಟ್ನಾಂನ ಆಸಿಯಾನ್ ಅಧ್ಯಕ್ಷೆತೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.