ಬೆಂಗಳೂರು, ನ.06(Daijiworld News/SS): ರಾಜ್ಯದ 20 ರೈಲು ನಿಲ್ದಾಣಗಳನ್ನು ಎ ದರ್ಜೆಗೆ ಏರಿಸಲಾಗುತ್ತಿದ್ದು, ಚಾಲ್ತಿಯಲ್ಲಿರುವ ಹಲವು ರೈಲ್ವೆ ಕಾಮಗಾರಿಗೆ ಅಡ್ಡಿಯಾಗಿದ್ದ ಭೂ ಸ್ವಾದೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ನಿಗದಿತ ಅವಧಿಯಲ್ಲಿ ಯೋಜನೆ ಪೂರೈಸಲು ರೈಲ್ವೆ ಇಲಾಖೆಗೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಉಪಸ್ಥಿತಿಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಂಗಳೂರು ಸೇರಿದಂತೆ ಬೆಂಗಳೂರು ಕಂಟೋನ್ಮೆಂಟ್, ಬೆಂಗಳೂರು ಸಿಟಿ ಎ-1, ಯಶವಂತಪುರ ಎ-1, ಕಲಬುರಗಿ-ಎ, ರಾಯಚೂರು, ಯಾದಗಿರಿ, ಬಂಗಾರಪೇಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಹೊಸಪೇಟೆ, ಹುಬ್ಬಳ್ಳಿ, ಕೆಂಗೇರಿ, ಕೃಷ್ಣಾರಾಜಪುರ, ಮೈಸೂರು, ಶಿವಮೊಗ್ಗ ಟೌನ್ ಒಟ್ಟು 20 ನಿಲ್ದಾಣಗಳು 'ಎ' ದರ್ಜೆಗೇರಲಿವೆ ಎಂದು ಹೇಳಿದ್ದಾರೆ.
ತುಮಕೂರು, ಚಿತ್ರದುರ್ಗ, ದಾವಣಗೆರೆ ರೈಲ್ವೆ ಮಾರ್ಗಕ್ಕೆ ಆದಷ್ಟು ಶೀಘ್ರ ಭೂ ಸ್ವಾಧೀನ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ವೈಟ್ ಫೀಲ್ಡ್ ಹಾಗೂ ಕೋಲಾರ ನಡುವಿನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನ ಅಡ್ಡಿಯಾಗಿದ್ದು, ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ಹುಬ್ಬಳ್ಳಿ- ಹೊಸಪೇಟೆ, ಹೊಸಪೇಟೆ-ಬಳ್ಳಾರಿ ಹಾಗೂ ಧಾರವಾಡ ಇಲ್ಲಿನ ಕಾಮಗಾರಿಗಳಿಗೆ ವೆಚ್ಚ ಹಂಚಿಕೆ, ಹೊಸ 13 ಯೋಜನೆಗಳಿಗೆ 12780.97 ಎಕರೆ ಅರಣ್ಯೇತರ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.