ಬೆಂಗಳೂರು, ನ.06(Daijiworld News/SS): ನ.10ರಂದು ಪ್ರತಿವರ್ಷ ಸರಕಾರದ ವತಿಯಿಂದಲೇ ರಾಜ್ಯದಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು 2015ರಲ್ಲಿ ಅಂದಿನ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಬಿಜೆಪಿ ಸರಕಾರವು 2019ರ ಜು.30ರಂದು ಆ ಅಧಿಸೂಚನೆ ರದ್ದುಗೊಳಿಸಿತ್ತು. ಅದನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಟಿಪ್ಪು ಜಯಂತಿ ನಿಷೇಧಿಸಿರುವ ರಾಜ್ಯ ಬಿಜೆಪಿ ಸರಕಾರದ ಆದೇಶ ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್ ಇಂದು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ರಾಜ್ಯ ಸರಕಾರ ಆದೇಶ ರದ್ದುಪಡಿಸಲು ಕೋರಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿರುವ ಅರ್ಜಿಯನ್ನು ಸಿಜೆ ಎ. ಎಸ್.ಓಕ್ ಅವರಿದ್ದ ವಿಭಾಗೀಯಪೀಠ ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ''ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದಂತೆ ಮನವಿ ಸಲ್ಲಿಸಲಾಗಿತ್ತೇ..? ಆಗ ಏನಾದರೂ ಆದೇಶ ಹೊರಡಿಸಲಾಗಿದೆಯೇ..? ಎಂಬ ಬಗ್ಗೆ ವಿವರಗಳನ್ನು ನೀಡುವಂತೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದು, ಇಂದು ಮತ್ತೆ ವಿಚಾರಣೆ ನಡೆಯಲಿದೆ.