ಬೆಂಗಳೂರು, ನ.06(Daijiworld News/SS): ಕೆಲವರು ತಾವು ಮುಖ್ಯಮಂತ್ರಿಯಾಗಲೇಬೇಕು ಎಂಬ ಸ್ವಾರ್ಥ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲವೆಂದು ಸರ್ಕಾರ ಬೀಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮೈತ್ರಿ ಸರ್ಕಾರ ಪತನವಾಗಲು ನಾನು ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಆ ಪ್ರಯತ್ನವನ್ನು ನಾನೆಂದೂ ಮಾಡಿಲ್ಲ. ನಮ್ಮ ಪಕ್ಷದ 80 ಜನ ಶಾಸಕರಿದ್ದರೂ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರಲ್ಲ ಎಂದು ನಮ್ಮ ಕಾರ್ಯಕರ್ತರೊಬ್ಬರು ಕೇಳಿದ್ದರು. ಅದಕ್ಕೆ ಲೋಕಸಭಾ ಚುನಾವಣೆ ಆಗುವವರೆಗೂ ತಾಳ್ಮೆಯಿಂದ ಇರಿ. ಚುನಾವಣೆ ನಂತರ ಕುಳಿತು ಮಾತನಾಡೋಣ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಈ ಬೆನ್ನಲ್ಲೇ ಕುಮಾರಸ್ವಾಮಿಯವರೂ ಟ್ವೀಟ್ ಮಾಡಿ ಸಿದ್ದರಾಮಯ್ಯನವರ ಹೆಸರು ಹೇಳದೆ ಆರೋಪ ಮಾಡಿದ್ದಾರೆ. ಕೆಲವರು ತಾವು ಮುಖ್ಯಮಂತ್ರಿಯಾಗಲೇಬೇಕು ಎಂಬ ಸ್ವಾರ್ಥ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲವೆಂದು ಸರ್ಕಾರ ಬೀಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪಕ್ಷ ಬಿಟ್ಟು ಹೋದವರಲ್ಲಿ ಕಾಂಗ್ರೆಸ್ನವರೇ ಹೆಚ್ಚು ಮಂದಿ ಇದ್ದಾರೆಂಬುದನ್ನು ಮರೆಯಬಾರದು. ಪಕ್ಕದ ಮನೆಯ ಒಲೆ ಆರಿಸುವ ಮೊದಲು ಹೊತ್ತಿ ಉರಿಯುತ್ತಿರುವ ನಿಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ ಎಂದು ಹೇಳಿದ್ದಾರೆ.