ಮೀರತ್, ನ 6 (Daijiworld News/MB): ದೆಹಲಿಯಲ್ಲಿ ಹದಗೆಟ್ಟಿರುವ ವಾತಾವರಣಕ್ಕೆ ಪಾಕಿಸ್ಥಾನ ಅಥವಾ ಚೀನಾ ನಮ್ಮ ದೇಶಕ್ಕೆ ವಿಷ ಅನಿಲ ಬಿಟ್ಟಿರುವುದೇ ಕಾರಣ ಎಂದು ಹೇಳಿ ಬಿಜೆಪಿ ನಾಯಕರೊಬ್ಬರು ನಗೆಪಾಟಲಿಗೆ ಒಳಗಾಗಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ನಾಯಕ ವಿನೀತ್ ಅಗರ್ ವಾಲ್ ಶಾರ್ದ 'ನಮ್ಮ ದೇಶದ ರಾಜದಾನಿ ದೆಹಲಿಯ ಗಾಳಿ ವಿಷಯುಕ್ತವಾಗಲು ನೆರೆರಾಷ್ಟ್ರಗಳ ಕುಮ್ಮಕ್ಕಿರಬಹುದು. ಮೋದಿ ಆಳ್ವಿಕೆಯಿಂದ ನೆರೆರಾಷ್ಟ್ರಗಳಿಗೆ ಭೀತಿ ಉಂಟಾಗಿದ್ದು, ಪಾಕಿಸ್ಥಾನ ಸತತವಾಗಿ ನಿರಾಸೆಯಾಗಿದೆ. ಅದರಿಂದಾಗಿ ಈ ವಿಷ ಗಾಳಿ ನಮ್ಮ ದೇಶಕ್ಕೆ ಬಿಡುತ್ತಿದ್ದಾರೆ. ಇದು ಅವರ ತಂತ್ರ' ಎಂದು ಹೇಳಿದ್ದಾರೆ.
ಈ ಬಾಲಿಶ ಹೇಳಿಕೆಯ ಬಳಿಕ 'ಕೇಜ್ರಿವಾಲ್ ವಾಯುಮಾಲಿನ್ಯಕ್ಕೆ ಕಾರ್ಖಾನೆಗಳು ಕಾರಣ ಎಂದು ಹೇಳಬೇಡಿ. ನಮ್ಮ ದೇಶದ ಬೆನ್ನೆಲುಬು ರೈತರು. ನಾವು ನಮ್ಮ ದೇಶದ ರೈತರು ಮತ್ತು ಕಾರ್ಖಾನೆಗಳನ್ನು ದೂಷಿಸಬಾರದು' ಎಂದು ಹೇಳಿದ್ದಾರೆ.
ದೆಹಲಿಯ ಹದಗೆಟ್ಟ ವಾತಾವರಣದ ಕುರಿತು ಸುಪ್ರಿಂ ಕೋರ್ಟ್ 'ದೆಹಲಿಯ ವಾಯುಮಾಲಿನ್ಯ ಹತ್ತಿರದ ಪ್ರದೇಶಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಾಗರಿಕ ದೇಶದಲ್ಲಿ ಈ ರೀತಿ ಆಗಬಾರದು. ಜನರು ವಿಷ ಅನಿಲದಿಂದಾಗಿ ಸಾವನಪ್ಪುತ್ತಿದ್ದಾರೆ. ರಾಜ್ಯ ಸರಕಾರ ಜನರಿಗೆ ದೆಹಲಿಗೆ ಬರದಂತೆ ಸಲಹೆ ನೀಡಬೇಕು' ಎಂದು ಹೇಳಿತ್ತು.