ಹೈದರಾಬಾದ್ ನ 6 (Daijiworld News/MB): ಸೈನೆಡ್ ಲೇಪಿತ ಪ್ರಸಾದ ನೀಡಿ ಆಂಧ್ರಪ್ರದೇಶದ ವಾಚ್ ಮೆನ್ ಒಬ್ಬ ಸುಮಾರು ಹತ್ತು ಮಂದಿಯನ್ನು ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಅಕ್ಟೋಬರ್ ತಿಂಗಳಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಸಾವನ್ನಪ್ಪಿದ್ದ ಶಂಕಿತ ಸಂತ್ರಸ್ತನೊಬ್ಬನ ಮೊಬೈಲ್ ಕರೆಗಳ ದಾಖಲೆ ಪರಿಶೀಲಿಸಿ ತನಿಖೆ ನಡೆಸಿದಾಗ ಆತ ಕೊನೆಯ ಬಾರಿ ಸಂಪರ್ಕಿಸಿದ ವ್ಯಕ್ತಿ ವಿ.ಸಿಂಹಾದ್ರಿ ಎಂಬಾತ ಎಂದು ತಿಳಿದಿದ್ದು, ತನಿಖೆಯ ವೇಳೆ ಆತನೇ ಸೈನೆಡ್ ಮಿಶಿತ್ರ ಪ್ರಸಾದ ನೀಡಿ ಕೊಂದಿರುವುದಾಗಿ ತಿಳಿದುಬಂದಿದೆ. ಫೋನ್ ಕಾಂಟ್ಯಾಕ್ಟ್ ಪರಿಶೀಲಿಸಿದಾಗ, ಸುಮಾರು ಹತ್ತು ಜನರು ಮೃತ ಹೊಂದಿರುವ ಅಂಶ ಬೆಳಕಿಗೆ ಬಂದಿದ್ದು, 2018 ಹಾಗೂ 2019ರ ನಡುವೆ ಹತ್ಯೆ ಮಾಡಿರುವುದಾಗಿ ಸಿಂಹಾದ್ರಿ ತಪ್ಪೊಪ್ಪಿಕೊಂಡಿದ್ದಾನೆ.
ಮೃತ ವ್ಯಕ್ತಿ ಬ್ಯಾಂಕ್ ನಲ್ಲಿ ಹಣ ಮತ್ತು ನಗದನ್ನು ಠೇವಣಿ ಇಡಲು ಮನೆಯಿಂದ ಹೋದ ಕೆಲವೇ ಗಂಟೆಗಳಲ್ಲಿ ಆತನ ಶವ ಪತ್ತೆಯಾಗಿತ್ತು. ಆದರೆ ಹಣ ಮತ್ತು ಚಿನ್ನ ನಾಪತ್ತೆಯಾಗಿತ್ತು.
ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಇಲ್ಲದ ಕಾರಣ ಪ್ರಾಥಮಿಕವಾಗಿ ಈ ವ್ಯಕ್ತಿ ಹೃದಯಾಘಾತದಿಂದ ಅಥವಾ ಮೆದುಳು ಆಘಾತದಿಂದ ಸಾವನ್ನಪ್ಪಿರಬೇಕೆಂದು ಶಂಕಿಸಿದ್ದೆವು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಸೈನೆಡ್ ಸೇವನೆಯಿಂದ ಸಾವು ಸಂಭವಿಸಿರುವುದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನವ್ ದೀಪ್ ಸಿಂಗ್ ತಿಳಿಸಿದ್ದಾರೆ.
ಏಲುರು ಕಾಂಪ್ಲೆಕ್ಸ್ ಅಪಾರ್ಟ್ ಮೆಂಟ್ ನಲ್ಲಿ ವಾಚ್ ಮೆನ್(ಕಾವಲುಗಾರ) ಆಗಿ ಕೆಲಸ ಮಾಡುತ್ತಿದ್ದ ಸಿಂಹಾದ್ರಿ ನಮಗೆ ಚಿನ್ನ ಅಥವಾ ಹಣವನ್ನು ತಂದುಕೊಟ್ಟರೆ ಅದನ್ನು ದುಪ್ಪಟ್ಟು ಮಾಡಿ ಕೊಡುವುದಾಗಿ ಜನರನ್ನು ನಂಬಿಸಿ, ಅವರು ಹಣ ಅಥವಾ ಚಿನ್ನ ತಂದಾಗ ಅದನ್ನು ಸ್ವೀಕರಿಸಿ ಸೈನೆಡ್ ಲೇಪಿತ ಪ್ರಸಾದ ನೀಡಿ ಹತ್ಯೆ ಮಾಡಿದ್ದಾನೆ. ವಿಜಯವಾಡದಲ್ಲಿ ಆತನ ಗೆಳೆಯನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತನ ಅಜ್ಜಿ ಹಾಗೂ ಸೊಸೆ ಸೈನೆಡ್ ನ ಪೂರೈಕೆ ಮಾಡುತ್ತಿದ್ದರು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.