ಬೆಂಗಳೂರು, ನ.07(Daijiworld News/SS): ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ಗಣತಿ ದಿಕ್ಸೂಚಿ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಮ್ಮಿಕೊಂಡಿದ್ದ 7 ನೇ ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, ದೇಶದ ಆರ್ಥಿಕ ವಸ್ತುಸ್ಥಿತಿ ಅರಿಯಲು ಮತ್ತು ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆರ್ಥಿಕ ಗಣತಿ ಪ್ರಮುಖ ಪಾತ್ರವಹಿಸಲಿದೆ. ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ಗಣತಿ ದಿಕ್ಸೂಚಿ ಆಗಿದೆ ಎಂದು ತಿಳಿಸಿದರು.
ಮೊಬೈಲ್ ಆಪ್ ವ್ಯವಸ್ಥೆಯಿಂದ ಮಾಹಿತಿಗಳನ್ನು ಅತಿ ಶೀಘ್ರವಾಗಿ ಸಂಗ್ರಹಿಸಲು ಸಾಧ್ಯವಾಗಲಿದೆ. ಮಾತ್ರವಲ್ಲ, ವರದಿ ತಯಾರಿಸುವುದು ಸೇರಿದಂತೆ ಮಾಹಿತಿಯು ಹೆಚ್ಚು ನಿಖರವಾಗಿರುತ್ತದೆ. ಪ್ರಥಮ ಬಾರಿಗೆ 7ನೇ ಆರ್ಥಿಕ ಗಣತಿಯನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸುತ್ತಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.