ಬೆಂಗಳೂರು, ನ.07(Daijiworld News/SS): ಕಾಲ-ಕಾಲಕ್ಕೆ ಏನೇನು ಆಗಬೇಕು ಅದು ಆಗುತ್ತೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾರ್ವಿುಕವಾಗಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಇಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ ನಮಗೇನು ಆಜನ್ಮ ಶತ್ರುಗಳಲ್ಲ. ಆಯಾ ಸಂದರ್ಭಕ್ಕೆ ಅನುಗುಣ ಹಾಗೂ ರಾಜಕೀಯವಾಗಿ ಮಾತಾಡಿರುತ್ತೇವೆ ಅಷ್ಟೇ. ಕಾಲ-ಕಾಲಕ್ಕೆ ಏನೇನು ಆಗಬೇಕು ಆಗುತ್ತೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಪಚುನಾವಣೆ ನಂತರ ಬಿಜೆಪಿಗೆ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂದಿನ ಸನ್ನಿವೇಶದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಏನು ನಿರ್ಧಾರ ಮಾಡುತ್ತವೆಂದು ಈಗ ಹೇಳಲು ಆಗುತ್ತಾ..? ಇಂತಹ ಕಾಲ್ಪನಿಕ ಪ್ರಶ್ನೆಗಳಿಗೆ ಯಾರಾದರೂ ಉತ್ತರ ಕೊಡಲು ಆಗುತ್ತಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಆಡಿದ್ದಾರೆಂಬ ಮಾತುಗಳನ್ನು ಒಳಗೊಂಡ ಆಡಿಯೋ ಅನ್ನು ಸುಪ್ರೀಂಕೋರ್ಟ್ ಸಾಕ್ಷಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿದೆ. ಇನ್ನು 2-3 ದಿನಗಳಲ್ಲಿ ತೀರ್ಪು ಬರುತ್ತದೆ. ಆದರೆ, ಆ ಆಡಿಯೋಗೆ ಕೋರ್ಟ್ ಹೆಚ್ಚು ಮಹತ್ವ ಕೊಟ್ಟಿದೆ ಎನ್ನುವ ಭಾವನೆ ನನಗಿಲ್ಲ. ಈ ಪ್ರಕರಣದಲ್ಲಿ ಈಗಾಗಲೇ ಕೋರ್ಟ್ ತೀರ್ಮಾನ ಮಾಡಿದೆ ಎನ್ನಿಸುತ್ತದೆ ಎಂದು ಹೇಳಿದರು.