ಬೆಂಗಳೂರು, ನ 7 (Daijiworld News/MB): ಶಾಲಾ ಆವರಣದ 50 ಮೀಟರ್ ಸುತ್ತಮುತ್ತ ಪ್ರದೇಶದಲ್ಲಿ ಜಂಕ್ ಫುಡ್ ಮಾರಾಟ ನಿಷೇಧಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈಗಾಗಲೇ ಕೇಂದ್ರ ಸರಕಾರ ಕುರುಕಲು ತಿಂಡಿಯಿಂದಾಗಿ ಮಕ್ಕಳ ಮೇಲೆ ಆಗುವ ದುಷ್ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಶಾಲಾ ಆವರಣದ ಸುತ್ತಮುತ್ತ ಕುರುಕಲು ತಿಂಡಿ ನಿಷೇಧ ಹೇರುವ ಚಿಂತನೆ ನಡೆಸುತ್ತಿದೆ. ಇದೇ ಚಿಂತನೆಯನ್ನು ಸಕಾರಗೊಳಿಸಲು ರಾಜ್ಯ ಸರಕಾರ ಈಗಲೇ ನಿಷೇಧಾಜ್ಞೆ ಜಾರಿಗೊಳಿಸಿದೆ.
ಜಂಕ್ ಫುಡ್, ಚಿಪ್ಸ್, ಇನ್ ಸ್ಟಂಟ್ ನೂಡಲ್ಸ್, ಅತಿಯಾದ ಕೊಬ್ಬು ಮತ್ತು ಸಕ್ಕರೆ ಅಂಶಗಳಿರುವ ಆಹಾರ,ತಂಪು ಪಾನೀಯಗಳು ಮತ್ತು ಪ್ಯಾಕ್ ಮಾಡಿರುವ ಆಹಾರವನ್ನು ಶಾಲೆಯ ಕ್ಯಾಂಟೀನ್ ಮತ್ತು ಶಾಲೆಗಳಿಂದ 50 ಮೀಟರ್ ಸುತ್ತಮುತ್ತ ಮಾರಾಟ ಮಾಡುವಂತಿಲ್ಲ ಎಂದು ಹಲವು ಮಾನದಂಡಗೊಂದಿಗೆ ಎಫ್ಎಸ್ಎಸ್ಎಐ ಸಿದ್ಧಪಡಿಸಿರುವ ಈ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಹತ್ತು ಅಂಶಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲಾ ಶಾಲೆಗಳು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕೆಂದು ಎಫ್ಎಸ್ಎಸ್ಎಐ ಹೇಳಿದೆ.
ಈ ಬಗ್ಗೆ ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಶಾಲೆಗಳ ಸುತ್ತಮುತ್ತಲು ಕುರುಕಲು ತಿಂಡಿಗಳನ್ನು ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕೈಗೊಳ್ಳಲಿದ್ದಾರೆ.
ಇನ್ನೂ ಶಾಲೆಗಳಿಗೆ ಆಹಾರ ಪೊರೈಕೆ ಮಾಡುವ ಗುತ್ತಿಗೆದಾರರು ಪರವಾನಿಗೆ, ನೈರ್ಮಲ್ಯ ಮತ್ತು ನೈರ್ಮಲ್ಯದ ಅವಶ್ಯಕತೆಗಳನ್ನು ಅನುಸರಿಸುವ ನೋಂದಣಿಯನ್ನು ಕಡ್ಡಾಯವಾಗಿ ಪಡೆದಿರಬೇಕು.
ಈ ಕುರಿತು ಮಾತಾನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಮೊದಲೆ ಈ ನಿರ್ಧಾರವನ್ನು ಕೈಗೊಳ್ಳಬೇಕಿತ್ತು. ಆದರೆ ಈಗ ನಿಷೇಧ ಮಾಡಲಾಗಿದೆ. ಶಾಲಾ ಆವರಣದ ಸುತ್ತಮುತ್ತ ಕುರುಕಲು ತಿಂಡಿ ಮಾರಾಟ ಮಾಡದಂತೆ ನೋಡಿಕೊಳ್ಳಲು ಪೊಲೀಸರ ಸಹಾಯ ಪಡೆಯಲಾಗುವುದು ಎಂದರು.
ಹಾಗೆಯೇ ಪೋಷಕರು ವಿದ್ಯಾರ್ಥಿಗಳಿಗೆ ಡಬ್ಬದಲ್ಲಿ ಕುರುಕಲು ತಿಂಡಿಗಳನ್ನು ಕೊಡುತ್ತಾರೆ. ಇದನ್ನು ಶಾಲಾ ಆಡಳಿತ ಮಂಡಳಿ ನಿಯಂತ್ರಿಸಬೇಕು. ಈ ಕುರಿತು ಶಾಲಾ ಆಡಳಿತ ಮಂಡಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.