ನವದೆಹಲಿ, ನ.07(Daijiworld News/SS): ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನವೆಂಬರ್ 17ಕ್ಕೆ ನಿವೃತ್ತರಾಗಲಿದ್ದು ಅದಕ್ಕೂ ಮೊದಲೇ ಅಯೋಧ್ಯಾ ತೀರ್ಪು ಹೊರಬೀಳಲಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಂತ್ರಿಮಂಡಲದ ಸದಸ್ಯರಿಗೆ ಕೆಲವು ಸೂಕ್ಷ್ಮ ಸಲಹೆಗಳನ್ನು ನೀಡಿದ್ದಾರೆ.
ಅಯೋಧ್ಯಾ ತೀರ್ಪಿಗೆ ಸಂಬಂಧಪಟ್ಟಂತೆ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ. ದೇಶದ ಸೌಹಾರ್ದತೆ, ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವತ್ತ ಗಮನಹರಿಸಿ ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯಾ ತೀರ್ಪನ್ನು ಯಾವ ಕಾರಣಕ್ಕೂ ಸೋಲು-ಗೆಲುವಿನ ದೃಷ್ಟಿಯಲ್ಲಿ ನೋಡಬಾರದು ಎಂದು ಕೂಡ ನರೇಂದ್ರ ಮೋದಿ ಹೇಳಿದ್ದಾರೆ ಎನ್ನಲಾಗಿದೆ.
ಈ ನಡುವೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮೂಲ ನಿವೇಶನ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಸದ್ಯವೇ ಬರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ನಿಯಂತ್ರಣವನ್ನು ಕೂಡ ಉತ್ತರಪ್ರದೇಶ ಸರ್ಕಾರ ಮಾಡಿದೆ.