ನವದೆಹಲಿ, ನ. 07 (DaijiworldNews/SM): ‘ಅಯೋಧ್ಯೆ’ ಹಲವು ದಶಕಗಳ ಪ್ರಕರಣ. ಇದೀಗ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ಸುಪ್ರೀಂ ಸಜ್ಜಾಗಿದೆ. ದೇಶದ ಚಿತ್ತವೇ ಅತ್ತ ನೆಟ್ಟಿದೆ. ಅತೀ ಸೂಕ್ಷ್ಮ ಪ್ರಕರಣವಾಗಿರುವ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಕುರಿತ ತೀರ್ಪು ಇಂದೋ ನಾಳೆಯೋ ಪ್ರಕಟವಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಮುಖವಾಗಿ ಅಯೋಧ್ಯೆಯನ್ನೊಳಗೊಂಡಿರುವ ಉತ್ತರಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಬೇಡ್ಕರ್ ನಗರದಲ್ಲಿರುವ ವಿವಿಧ ಕಾಲೇಜುಗಳಲ್ಲಿ ಮುನ್ನೆಚ್ಚರಿಕೆಯಾಗಿ ಸರಕಾರ ಎಂಟು ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸಿದೆ. ಅಕ್ಬರ್ ಪುರ್, ಟಾನ್ ಡಾ, ಜಲಾಲ್ ಪುರ್, ಜೈಟ್ ಪುರ್, ಭಿಟಿ ಮತ್ತು ಅಲ್ಲಾಪುರ್ ಗಳಲ್ಲಿ ತಾತ್ಕಾಲಿಕ ಜೈಲುಗಳನ್ನು ಸಿದ್ಧಗೊಳಿಸಲಾಗಿದೆ.
ಈ ವಿವಾದದ ತೀರ್ಪು ಒಂದು ವರ್ಗದ ಪರವಾಗಿ ಬಂದಾಗ ಮತ್ತೊಂದು ವರ್ಗದ ಆಕ್ರೋಶ ಸ್ಪೋಟಗೊಳ್ಳುವುದು ಸಾಮಾನ್ಯ. ಈ ಕಾರಣದಿಂದಾಗಿ ಆಕ್ರೋಶಿತರನ್ನು ನಿಯಂತ್ರಿಸಲು ತಾತ್ಕಾಲಿಕ ಜೈಲುಗಳನ್ನು ಸಿದ್ಧಗೊಳಿಸಿ ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಿ ಭದ್ರತೆ ಒದಗಿಸಲಾಗಿದೆ.
ಇನ್ನು ಪ್ರಮುಖವಾಗಿ ಅಯೋಧ್ಯೆ ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸ್ ಸರ್ಪಗಾವಲಿನಿಂದ ಕೂಡಿದೆ. ಈಗಾಗಲೇ ಇಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸ್ ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಗಳ ಮೂಲಕ ಸರ್ಪಗಾವಲನ್ನು ಉಂಟು ಮಾಡಲಾಗಿದೆ. ಉತ್ತರ ಪ್ರದೇಶದೆಲ್ಲೆಡೆ ಹಾಗೂ ದೇಶದೆಲ್ಲೆಡೆ ಎಲ್ಲಾ ರೀತಿಯ ಭದ್ರತಾ ಕ್ರಮಗಳು ಕೈಗೊಂಡ ಬಳಿಕವಷ್ಟೇ ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೀಗ ದೇಶವೇ ಸುಪ್ರೀಂನತ್ತ ಮುಖ ಮಾಡಿದ್ದು, ಅಯೋಧ್ಯೆ ಯಾರ ಪಾಲಾಗುತ್ತೆ ಎಂಬುವುದು ಕುತೂಹಲವಾಗಿದೆ.