ಚೆನ್ನೈ, ನ 8 (Daijiworld News/MSP): ಬಿಜೆಪಿ ಪಕ್ಷವೂ ನನಗೆ ಕೇಸರಿ ಬಣ್ಣ ಬಳಿಯುವ ಪ್ರಯತ್ನ ನಡೆಸುತ್ತಿದೆ. ಅದರೆ ಅವರ ತಂತ್ರದಲ್ಲಿ ನಾನು ಸಿಲುಕುವುದಿಲ್ಲ, ನಾನು ಬಿಜೆಪಿಯ ಮನುಷ್ಯನಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ವದಂತಿಗಳಿಗೆ ನಟ ರಜನಿಕಾಂತ್ ತೆರೆ ಎಳೆದಿದ್ದಾರೆ.
ಮಾಧ್ಯಮಗಳ ಮುಂದೆ ಈ ಕುರಿತು ಮಾತನಾಡಿದ ಅವರು , " ತಮಿಳುನಾಡು ಬಿಜೆಪಿಯೂ ಇತ್ತೀಚೆಗೆ ಕೇಸರಿ ಬಟ್ಟೆ ಹಾಕಿರುವ ಕವಿ ತಿರುವಳ್ಳುವರ್ ಫೋಟೊವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿತ್ತು. ಕವಿ ತಿರುವಳ್ಳುವರ್ ಅವರಂತೆ ನನಗೂ ಕೇಸರಿ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ ಆದರೆ ನಾನಿದರಲ್ಲಿ ಸಿಲುಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಿರುವಳ್ಳುವರ್ ಒಬ್ಬ ಸಂತ. ಅವರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತರಾಗಿಲ್ಲ. ಅವರೊಬ್ಬರು ನಾಸ್ತಿಕರಾಗಿದ್ದು ಅವರಿಗೂ ಕೇಸರಿ ಬಳಿಯುವುದು ತಪ್ಪು ಎಂದರು.
ತಮ್ಮ ಪಕ್ಷಕ್ಕೆ ಸೇರುವಂತೆ ನನಗೆ ಬಿಜೆಪಿ ನನಗೆ ಯಾವುದೇ ಆಫರ್ ನೀಡಿಲ್ಲ. ಆದರೆ ನನ್ನನ್ನು ಕೇಸರೀಕರಣ ನಡೆಸುವ ಪ್ರಯತ್ನ ನಡೆಸುತ್ತಿದೆ. ಮಾಧ್ಯಮಗಳು ಕೂಡ ಬಿಜೆಪಿಗನಂತೆ ಬಿಂಬಿಸಲು ಮುಂದಾಗಿದೆ, ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ನಿರ್ಧಾರ ಕೈಗೊಳ್ಳುವುದು ನನ್ನದೇ ತೀರ್ಮಾನ ಎಂದರು. ಈ ಹಿಂದೆ ರಜನಿಕಾಂತ್ ಅವರು ಕೂಡ ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಾಗಳನ್ನು ಕೂಡ ಹರಡಿದ್ದವು. ಈ ಹಿನ್ನೆಲೆಯಲ್ಲಿ ಸೂಪರ್ಸ್ಟಾರ್ ಮೌನ ಮುರಿದಿದ್ದಾರೆ.