ನವದೆಹಲಿ, ನ.08(Daijiworld News/SS): ನೋಟು ನಿಷೇಧವಾಗಿ ಇಂದಿಗೆ ಮೂರು ವರ್ಷ ಕಳೆದಿದ್ದು, ಎನ್ಡಿಎ ಸರಕಾರದ ಈ ನಡೆ ಭಯೋತ್ಪಾದಕ ದಾಳಿಯಂತಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನೋಟ್ ಬ್ಯಾನ್ ಆರ್ಥಿಕತೆ ಮೇಲೆ ಮಾಡಿದ ಭಯೋತ್ಪಾದಕ ದಾಳಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದು, ಅಲ್ಲದೇ ಕೇಂದ್ರ ಸರಕಾರದ ಈ ಕ್ರಮ ನಾಶದ ಸಂಕೇತ ಎಂದು ತಿಳಿಸಿದ್ದಾರೆ.
ನೋಟು ರದ್ದತಿಯಂತಹ ಭಯೋತ್ಪಾದಕ ದಾಳಿ ನಡೆದು ಇಂದಿಗೆ 3 ವರ್ಷ ಕಳೆದಿವೆ. ಇದು ಭಾರತೀಯ ಆರ್ಥಿಕತೆಯನ್ನು ನಾಶಗೊಳಿಸಿದ್ದು, ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಲಕ್ಷಾಂತರ ಸಣ್ಣ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಹಸ್ರಾರು ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ನ ವರಿಷ್ಠೆ ಪ್ರಿಯಾಂಕಾ ವಾದ್ರಾ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನೋಟು ನಿಷೇಧ ದೇಶಕ್ಕೆ ವಿಪತ್ತಾಗಿ ಕಾಡಿದ್ದು, ಇದರ ಜವಾಬ್ದಾರಿಯನ್ನು ಬಿಜೆಪಿ ಸರಕಾರ ಹೊರಲು ಬಯಸುತ್ತದಯೇ ಎಂದು ಪ್ರಶ್ನಿಸಿದ್ದಾರೆ. ನೋಟು ರದ್ದತಿ ನಮ್ಮ ಆರ್ಥಿಕತೆಯನ್ನು ನಾಶಪಡಿಸಿದೆ ಎಂದು ಟೀಕಿಸಿದ್ದಾರೆ.