ಬೆಂಗಳೂರು, ನ.08(Daijiworld News/SS): ವೈದ್ಯರ ಮುಷ್ಕರ ಅಂತ್ಯವಾಗಿದ್ದು ರಾಜ್ಯಾದ್ಯಂತ ಒಪಿಡಿ ಸೇವೆ ಪುನಾರಂಭವಾಗಿದೆ ಎಂದು ವೈದ್ಯರ ಸಂಘ ತಿಳಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೋಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ, ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ. ಅಶ್ವಿನಿ ಗೌಡ ಸೇರಿ 13 ಮಂದಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಬೆಳಿಗ್ಗೆ ಬೆಂಗಳೂರು ವಿವಿ ಪುರಂ ಪೋಲೀಸರಿಗೆ ಶರಣಾಗಿದ್ದಾರೆ.
"ಈ ಕ್ಷಣದಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದೇವೆ. ಕನ್ನಡ ಸಂಘದ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ್ದಾರೆ. ನಮಗೆ ಭದ್ರತೆ ಒದಗಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಆ ಎಲ್ಲಾ ಕಾರಣಗಳಿಂದ ನಾವು ಮುಷ್ಕರವನ್ನು ಕೈಬಿಟ್ಟಿದ್ದೇವೆ" ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಎಲ್.ಎನ್. ರೆಡ್ಡಿ ಹೇಳಿದ್ದಾರೆ.
ಮಿಂಟೊ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಘಟನೆಯನ್ನು ಖಂಡಿಸಿ ಕಿರಿಯ ವೈದ್ಯರು ನವಂಬರ್ 1ರಿಂದಲೇ ನಿರಂತರ ಪ್ರತಿಭಟನೆ ನಡೆಸಿದ್ದರು.