ಮೈಸೂರು, ನ.08(Daijiworld News/SS): ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎಲ್ಲ ಜಾತಿ-ಜನಾಂಗದ ಬಡವರ ಉದ್ಧಾರಕ್ಕೆ ಕೆಲಸ ಮಾಡಿದೆ. ಆದರೆ, ಕೆಲವರು ರಾಜಕೀಯವಾಗಿ ನಾನು ಒಂದು ಜಾತಿ ಪರವಾಗಿ ನಿಂತೆ ಎನ್ನುತ್ತಾರೆ. ಅಂತಹವರಿಗೆ ತಮ್ಮ ಬೆನ್ನು ಕಾಣುವುದಿಲ್ಲ. ಕಾಮಾಲೆ ಕಾಯಿಲೆಯವರಿಗೆ ಬಣ್ಣ ಸರಿಯಾಗಿ ಕಾಣಲ್ಲ ಎಂದು ರಾಜಕೀಯ ವಿರೋಧಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಕುಟುಕಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಲ್ಲರಿಗೂ ನಾನೇ ಟಾರ್ಗೆಟ್ ಆಗಿದ್ದೇನೆ. ಬಿಜೆಪಿಯವರೂ ನನ್ನನ್ನೇ ಬೈಯ್ತಾರೆ, ಜೆಡಿಎಸ್ನವರೂ ನನ್ನನ್ನೇ ಬೈಯ್ಯುತ್ತಾರೆ. ನೀವೆಲ್ಲ ಬೈಯ್ಯುದನ್ನು ಕೇಳಿಸಿಕೊಂಡು ಸುಮ್ಮನಾಗುತ್ತೀರಿ. ನಾನು ಏನೂ ತಪ್ಪು ಮಾಡಿಲ್ಲ. ಮುಂದೆಯೂ ಮಾಡಲ್ಲ. ಆದರೆ ಅಸೂಯೆಯಿಂದ ಹೀಗೆ ಮಾತನಾಡುತ್ತಾರೆ. ಅಸೂಯೆ ಹಾಗೂ ಹೊಟ್ಟೆ ಕಿಚ್ಚು ಬಂದವರಿಗೆ ಯಾವುದೇ ಔಷಧ ಇಲ್ಲ. ಅಂತವರನ್ನೂ ಏನೂ ಮಾಡೋಕೆ ಆಗುವುದಿಲ್ಲ ಎಂದು ಹೇಳಿದರು.
ಬಾಯಿ ಮಾತಿಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಈಗ ಸಬ್ ಕಾ ವಿನಾಶ್ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ 800 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದಾರೆ. ನಾವು ಒಂದು ತಿಂಗಳು ಕೂಡ ಉಳಿಸಿಕೊಂಡಿಲ್ಲ ಎಂದು ಹೇಳಿದರು.
ನಮ್ಮ ಸಮಾಜ ಕೆಲಸ ಮಾಡಿದವರನ್ನು ಗುರುತಿಸುವುದು ಕಮ್ಮಿ. ಕೆಲಸ ಮಾಡದವರಿಗೆ ಅಧಿಕಾರ ಕೊಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.