ನವದೆಹಲಿ, ನ.09(Daijiworld News/SS): ಕೇಂದ್ರ ಸರ್ಕಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತಾ ವ್ಯವಸ್ಥೆ ( ಎಸ್’ಪಿಜಿ) ಯನ್ನು ವಾಪಸ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಸ್ಪಿಜಿಗೆ ಧನ್ಯವಾದ ಹೇಳಿದ್ದಾರೆ.
ಎಸ್ಪಿಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಕಳೆದ 28 ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ. ಅಲ್ಲದೆ ನಿಮ್ಮ ನಿರಂತರ ಬೆಂಬಲ ಹಾಗೂ ವಾತ್ಸಲ್ಯದಿಂದ ತುಂಬಿದ್ದ ಪ್ರಯಾಣಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ನಡುವೆ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ವಿಶೇಷ ಭದ್ರತಾ ವ್ಯವಸ್ಥೆ ( ಎಸ್’ಪಿಜಿ) ಯನ್ನು ವಾಪಸ್ ಪಡೆದುಕೊಂಡಿರುವುದಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಬಿಜೆಪಿಯವರು ಸೋನಿಯಾ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಜೀವನದಲ್ಲಿ ಆಟವಾಡುತ್ತಿದ್ದಾರೆ. ಯಾವ ಆಧಾರದ ಮೇಲೆ ಅವರು ಭದ್ರತೆಯನ್ನು ಹಿಂಪಡೆಯುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವೈಯಕ್ತಿಕವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದೆ.