ನವದೆಹಲಿ, ನ.09(Daijiworld News/SS): ಅಯೋಧ್ಯಾ ರಾಮಮಂದಿರ ಹಾಗೂ ಬಾಬರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರಿಂಕೋರ್ಟ್ ನೀಡಿದೆ. ಸದ್ಯ ಅಯೋಧ್ಯೆ ತೀರ್ಪು ಸಂಬಂಧ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇದೊಂದು ಐತಿಹಾಸಿಕ ತೀರ್ಪು, ಜನತೆ ಶಾಂತಿ ಹಾಗೂ ತಾಳ್ಮೆಯಿಂದ ಇರಬೇಕೆಂದು ಹೇಳಿದ್ದಾರೆ.
ಸಾಂವಿಧಾನಿಕ ಪೀಠದ ತೀರ್ಪನ್ನು ನಾವೆಲ್ಲರೂ ಸ್ವಾಗತಿಸೋಣ. ಶಾಂತಿ ಹಾಗೂ ಸುವ್ಯಸ್ಥೆ ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ತೀರ್ಪಿನ ಮೂಲಕ ಸಾಂವಿಧಾನಿಕ ಪೀಠ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ದೇಶಕ್ಕೆ ನೀಡಿದೆ ಎಂದು ಹೇಳಿದ್ದಾರೆ.
ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ನೀಡಿರುವ ಸರ್ವಾನುಮತದ ತೀರ್ಪು ಇದಾಗಿದ್ದು, ವಿವಾದಿತ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದೆ. ಇಲ್ಲಿ ಹಿಂದುಗಳು ರಾಮಮಂದಿರ ನಿರ್ಮಾಣ ಮಾಡಲು ಅಸ್ತು ಎಂದಿರುವ ಸುಪ್ರೀಂಕೋರ್ಟ್ ಮುಸ್ಲಿಮರಿಗೆ ಮಸೀದಿ ಕಟ್ಟಲು ಬೇರೆ ಕಡೆ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್ಗೆ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ರಾಮಮಂದಿರ ನಿರ್ಮಾಣದ ಸಂಬಂಧ ಮೂರು ತಿಂಗಳೊಳಗೆ ಟ್ರಸ್ಟ್ ರಚನೆ ಮಾಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಸುಪ್ರೀಂಕೋಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ಎ. ಬಾಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ ಸೆಪ್ಟೆಂಬರ್ 16ರಿಂದ ನಲವತ್ತು ದಿನಗಳ ಕಾಲ ನಿರಂತರ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.