ಬೆಂಗಳೂರು, ನ.09(Daijiworld News/SS): ಅಯೋಧ್ಯಾ ರಾಮಮಂದಿರ ಹಾಗೂ ಬಾಬರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರಿಂಕೋರ್ಟ್ ನೀಡಿದೆ. ಈ ತೀರ್ಪು ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುಪ್ರೀಂ ತೀರ್ಪನ್ನು ಗೌರವಪೂರ್ವಕವಾಗಿ ಸ್ವಾಗತಿಸಿದ್ದು, ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ, ಯಾರೂ ವಿಜೃಂಭಿಸಬೇಡಿ. ಸಮಾಜದ ಸಾಮರಸ್ಯ ಕದಡದೆ, ಶಾಂತಿ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸುಪ್ರೀಂ ತೀರ್ಪನ್ನು ಉದ್ವೇಗಕ್ಕೆ ಒಳಗಾಗದೆ ಸಮಚಿತ್ತದಿಂದ ಸ್ವೀಕರಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ಹೇಳಿದ್ದಾರೆ.