ನವದೆಹಲಿ, ನ 9 (Daijiworld News/MSP): ವಿವಾದಿತ ಬಾಬರಿ ಮಸೀದಿ-ರಾಮ್ ದೇವಾಲಯದ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಅಸ್ತು ಎಂದ ಸುಪ್ರೀಂ ಕೋರ್ಟ್ನ ತೀರ್ಪು ತೃಪ್ತಿ ನೀಡಿಲ್ಲ ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ’ಸರ್ವೋಚ್ಚ ’ವಾಗಿರುವುದು ನಿಜ ಅದರೆ ’ದೋಷಾತೀತ’ವಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಮುಸ್ಲಿಮರ ಪರ ವಾದಮಂಡಿಸಿದ ವಕೀಲರಿಗೆ ನಾನು ಈ ಸಂದರ್ಭ ಅಭಿನಂದಿಸುತ್ತೇನೆ. ಆದರೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತೃಪ್ತಿದಾಯಕವಾಗಿಲ್ಲ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ವಿನಾ 5 ಎಕ್ರೆ ಭೂಮಿ ನೀಡುವಂತೆ ಅಲ್ಲ. ನಮಗೆ ಮಸೀದಿ ಕಟ್ಟಲು ಹಣವಿಲ್ಲವೆಂದಲ್ಲ. 5 ಎಕರೆ ಜಮೀನಿನ ಭಿಕ್ಷೆ ನಮಗೆ ಬೇಡ ನಾವೆಲ್ಲರೂ ಇದನ್ನು ತಿರಸ್ಕೃರಿಸಬೇಕು ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಅಲ್ಲಾನಿಗೆ ಜಮೀನು ಖರೀದಿಸುವುದಷ್ಟೇ ಅಲ್ಲ, ಮಸೀದಿ ಕಟ್ಟುವುದು ಕೂಡಾ ನಮಗೆ ದೊಡ್ಡ ಕಷ್ಟವಲ್ಲ. ಆದರೆ ನಾವು ನಮ್ಮ ಸ್ವಾಭಿಮಾನಕ್ಕಾಗಿ, ಹಕ್ಕಿಗಾಗಿ ಹೋರಾಡಿದ್ದು ಎಂದರು.
ಇದೇ ವೇಳೇ ರಾಮಮಂದಿರ ತೀರ್ಪನ್ನು ಬೆಂಬಲಿಸಿದ ಕಾಂಗ್ರೆಸ್ ಬಗ್ಗೆ ಟೀಕಿಸಿದ ಓವೈಸಿ ಕಾಂಗ್ರೆಸ್ ತನ್ನ ನಿಜವಾದ ಬಣ್ಣವನ್ನು ಬಯಲು ಮಾಡಿದೆ. ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಇದರಿಂದ ಹೊರಬಿದ್ದಿದೆ ಎಂದರು.