ನವದೆಹಲಿ, ನ 9 (Daijiworld News/MSP): ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ನಾವೆಲ್ಲಾ ಗೌರವಿಸಿದ್ದು, ಸುಪ್ರೀಂ ಪಂಚಪೀಠ ನೀಡಿದ ತೀರ್ಪನ್ನು ಪುನರ್ ಪರಿಶೀಲಸುವಂತೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಮಹತ್ವದ ನಿರ್ಧಾರವನ್ನು ತಿಳಿಸಿದೆ.
ತೀರ್ಪು ಹೊರಬೀಳುತ್ತಿದ್ದಂತೆ ಅಸಮಾಧಾನ ವ್ಯಕ್ತ ಪಡಿಸಿದ್ದ ಸುನ್ನಿ ವಕ್ಫ್ ಬೋರ್ಡ್ ಪತ್ರಿಕಾಗೋಷ್ಟಿ ನಡೆಸಿ, ಸುಪ್ರೀಂಕೋರ್ಟ್ ತೀರ್ಪು ತೃಪ್ತಿಕರವಾಗಿಲ್ಲ, ಆದರೆ ಗೌರವಿಸುತ್ತೇವೆ ಎಂದು ತಿಳಿಸಿತ್ತು. ಮಾತ್ರವಲ್ಲದೆ ನಮ್ಮ ಮುಂದಿನ ನಡೆ ಏನು ಎಂದು ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿತ್ತು.
ಆ ಬಳಿಕ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ನ ಅಧ್ಯಕ್ಷ ಜುಫರ್ ಫಾರೂಕ್ ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು ಮೇಲ್ಮನವಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಅದರಂತೆ ಎಲ್ಲರಿಗೂ ಒಪ್ಪಿಗೆಯಾಗಿರುವ ಸುಪ್ರೀಂ ನೀಡಿದ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ತಿಳಿಸಿದೆ. ಆದರೆ ಯಾರಾದರೂ ವೈಯಕ್ತಿಕವಾಗಿ ಅಥವಾ ಸಂಘಟನೆ ಮೂಲಕ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಎಂಬ ಹೆಸರಿನಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ ಅದಕ್ಕೆ ನಾವು ಕಾರಣರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.