ಮುಂಬೈ, ನ 09 (DaijiworldNews/SM): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತವನ್ನು ಪಡೆದಿಲ್ಲ. ಹೀಗಾಗಿ ಸರಕಾರ ರಚನೆಯೇ ಗೊಂದಲವಾಗಿದೆ. ಈ ನಡುವೆ ಬಿಜೆಪಿ ಪಕ್ಷಕ್ಕೆ ಸರಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಆಫರ್ ನೀಡಿದ್ದಾರೆ. ಈಗಾಗಲೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರಿಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಸರಕಾರ ರಚಿಸುವ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಉಭಯ ಪಕ್ಷದ ಮುಖಂಡರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ಮೈತ್ರಿ ಸರಕಾರ ಅಥವಾ 50-50 ಸರಕಾರ ರಚನೆ ಅಂದುಕೊಂಡಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ.
ಕಳೆದ ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಅಕ್ಟೋಬರ್ 24ರಂದು ಫಲಿತಾಂಶ ಹೊರಬಿದ್ದಿತ್ತು. ಯಾವುದೇ ಒಂದು ಪಕ್ಷಕ್ಕೆ ಸ್ಪಶ್ಟ ಬಹುಮತ ಹಾಗೂ ಕನಿಷ್ಟ ಮ್ಯಾಜಿಕ್ ನಂಬರ್ ನ ಆಸುಪಾಸಿನ ಸಂಖ್ಯೆಗಳಷ್ಟು ಸ್ಥಾನ ಸಿಕ್ಕಿಲ್ಲ. ಈ ಹಿನ್ನೆಲೆ ಮೈತ್ರಿ ನಡೆಸುವುದು ಅನಿವಾರ್ಯವೆನಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಗೆ ಸರಕಾರ ರಚನೆ ಆಕಾಶಕ್ಕೆ ಏಣಿ ಇಟ್ಟಂತೆ. ಇನ್ನು ಫಲಿತಾಂಶ ಹೊರಬಿದ್ದು 15 ದಿನ ಕಳೆದರೂ ಯಾವುದೇ ಪಕ್ಷ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಲಿಲ್ಲ.
ಈ ಮಧ್ಯೆ ಹಾಲಿ ವಿಧಾನಸಭೆಯ ಅವಧಿ ನವಂಬರ್ 09ರಂದು ಅಂತ್ಯಗೊಂಡಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಬದಲು ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸ್ವಸಾಮರ್ಥ್ಯದ ಮೇಲೆ ಸರ್ಕಾರ ರಚನೆ ಮಾಡುವಂತೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿದ್ದು, ಸರ್ಕಾರ ರಚನೆಯ ಬಳಿಕ ಬಹುಮತ ಸಾಬೀತುಪಡಿಸುವುದು ಅನಿವಾರ್ಯವಾಗಿದೆ.