ಕೊಲ್ಕತ್ತಾ, ನ 10 (Daijiworld News/MB) : ಬುಲ್ ಬುಲ್ ಚಂಡಮಾರುತದ ಅಟ್ಟಹಾಸ ತೀವ್ರಗೊಂಡಿದ್ದು, ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬುಲ್ ಬುಲ್ ಚಂಡಮಾರುತದ ಪರಿಣಾಮ ಹೆಚ್ಚಾಗಿದ್ದು ಕೊಲ್ಕತ್ತಾ ಕ್ರಿಕೆಟ್ ಹಾಗೂ ಫುಟ್ ಬಾಲ್ ಕ್ಲಬ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದವನ ಮೇಲೆ ದೇವದಾರು ಮರ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಹೈಅಲರ್ಟ್ ಘೋಷಣೆ ಮಾಡಿವೆ. ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಕೊಲ್ಕತ್ತಾ ನಗರದಲ್ಲಿ 48 ಗಂಟೆಗಳಲ್ಲಿ 104 ಮಿಲಿ ಮೀಟರ್ ಮಳೆಯೊಂದಿಗೆ 50-70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.
ಒಡಿಶಾದಲ್ಲೂ ಚಂಡಮಾರುತದ ಪರಿಣಾಮ ಬೀರಿದ್ದು ಮಳೆ ಹಾಗೂ ತೀವ್ರ ಗಾಳಿ ಕಾಣಿಸಿಕೊಂಡಿದೆ. ಕೊಲ್ಕತ್ತಾದಲ್ಲಿ ಮಳೆ ಕಡಿಮೆ ಸುರಿಯುತ್ತಿದ್ದರೂ ಗಾಳಿ ಪ್ರಬಲವಾಗಿದ್ದು ಸಾಗರ್ ದ್ವೀಪಕ್ಕೆ ಅಪ್ಪಳಿಸಿ ಈಶಾನ್ಯ ಪ್ರದೇಶದ ಕಡೆ ಚಲಿಸಿ ಬಾಂಗ್ಲದೇಶದ ಕೇಪುಪಾರದತ್ತ ಮುಖ ಮಾಡಿದೆ.
ಕರಾವಳಿ ಜಿಲ್ಲೆಗಳಾದ ಜಗತ್ ಸಿಂಗ್ ಪುರ್ , ಭದ್ರಕ್, ಕೇಂದ್ರಪಾರ, ಬಲಸೋರ್ ನಲ್ಲಿ ಬೆಳೆಗಳಿಗೆ ಅಗಾಧ ಪ್ರಮಾಣದ ಹಾನಿಯಾಗಿದ್ದು, ವಿದ್ಯುತ್ ಕಂಬ, ಮರ, ಟೆಲಿಫೋನ್ ಕಂಬಗಳು ನೆಲಕ್ಕೆ ಉರುಳಿದೆ. ಹಲವು ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜೀವ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯವರು, 'ಭಾರೀ ಮಳೆ, ಚಂಡಮಾರುತಯ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದೇನೆ. ಕೇಂದ್ರದಿಂದ ಅಗತ್ಯ ಪರಿಹಾರಗಳನ್ನು ನೀಡಲಾಗುತ್ತದೆ. ಪ್ರತಿಯೊಬ್ಬರ ಸುರಕ್ಷತೆಗೆ ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.