ಬೆಂಗಳೂರು, ನ 10 (Daijiworld News/MB) : ವ್ಯಾಪಾರದಲ್ಲಾದ ನಷ್ಟದಿಂದಾಗಿ ಆರ್ಥಿಕ ತೊಂದರೆಗೊಳಗಾದ ವ್ಯಕ್ತಿ ಮುಖ್ಯಮಂತ್ರಿ ಯಡಿಯೂರಪ್ಪರ ಬಳಿ ಪರಿಹಾರ ಕೇಳಲು ಬಂದಿದ್ದು, ಮುಖ್ಯಮಂತ್ರಿಯನ್ನು ಭೇಟಿಯಾಗಲು ಆಗುವುದಿಲ್ಲ ಎಂದು ತಿಳಿದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಗರದ ಸಂಜಯನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿ ರಂಗಧಾಮ (33) ಪಾವಗಡ ಜಿಲ್ಲೆಯ ವಡನಕಲ್ಲಿನವನೆಂದು ತಿಳಿದು ಬಂದಿದೆ.
ರಂಗಧಾಮ ನಗರದ ಆರ್.ಎಂ.ವಿ. ಬಳಿ ಇರುವ ಪಾರ್ಕ್ ಒಂದರಲ್ಲಿ ವಿಷ ಸೇವಿಸಿದ್ದು, ನೋವಿನಲ್ಲಿ ನರಳಾಡುತ್ತಿದ್ದುದನ್ನು ಗಮನಿಸಿದ ಜನರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತನು ಅಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದ ರಂಗಧಾಮ ಮುಖ್ಯಮಂತ್ರಿಯನ್ನು ಭೇಟಿಯಾಗಲು ಅವರ ನಿವಾಸಕ್ಕೆ ಬಂದಿದ್ದು, ಅಲ್ಲಿ ಮುಖ್ಯಮಂತ್ರಿ ಇಲ್ಲದ ಕಾರಣ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.