ಬೆಂಗಳೂರು,ನ 10 (Daijiworld News/MB) : ಶಾಸಕರ ಅನರ್ಹತೆಯಿಂದಾಗಿ ತೆರವಾಗಿದ್ದ 15 ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಅಧಿಸೂಚನೆ ನಾಳೆ ಹೊರಬೀಳಲಿದೆ.
ಉಪಚುನಾವಣೆ ನಡೆಯಲಿರುವುದರಿಂದ ನಾಳೆಯಿಂದಲೇ ನೀತಿ ಸಂಹಿತೆ ಸಹ ಜಾರಿಗೆ ಬರಲಿದ್ದು, ಚುನಾವಣೆ ನಡೆಯುವ ಜಾಗದಲ್ಲಿ ಮಾತ್ರ ನೀತಿ ಸಂಹಿತೆ ಅನ್ವಯಿಸುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಭಾನುವಾರ ಮಾದ್ಯಮಗಳಿಗೆ ತಿಳಿಸಿದ್ದಾರೆ.
15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಉಪಚುನಾವಣೆಗೆ ಈಗಲೇ ಚುನಾವಣಾ ಆಯೋಗ ಸಿದ್ದತೆ ಮಾಡಿಕೊಂಡಿದೆ.
"ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿ ಮಾಡಿದರೆ ಅಭಿವೃದ್ದಿ ಕಾರ್ಯಗಳಿಗೆ ಅಡಚಣೆಯಾಗುವ ಕಾರಣ ಈ ನಿರ್ಧಾರ ಕೈಗೊಳ್ಳಾಗಿದೆ ಮಾಡಲಾಗಿದೆ" ಸಂಜೀವ್ ಕುಮಾರ್ ಹೇಳಿದ್ದಾರೆ.
ಡಿ.5ರಂದು ಮತದಾನ ನಡೆಯಲ್ಲಿದ್ದು, ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಾದ ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್, ಬಳ್ಳಾರಿ ಜಿಲ್ಲೆಯ ವಿಜಯನಗರ, ಮೈಸೂರು ಜಿಲ್ಲೆಯ ಹುಣಸೂರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. 18ಕ್ಕೆ ನಾಮಪತ್ರ ಸಲ್ಲಿಕೆ ಕೊನೆಗೊಳ್ಳಲಿದ್ದು, ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.5ರಂದು ಮತದಾನ ನಡೆದು, ಡಿ.11ರಂದು ಮತ ಎಣಿಕೆ ನಡೆಯಲಿದೆ.
"ಈ ಬಾರಿ ಎಂ-3 ಮಾದರಿಯ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಮುನ್ನ 2018ರ ಬೆಂಗಳೂರು ಸೆಂಟ್ರಲ್ ನಲ್ಲಿ ಇಂತಹ ಮತಯಂತ್ರಗಳನ್ನು ಬಳಸಲಾಗಿತ್ತು. ಇವು ಸುಧಾರಿತ ಯಂತ್ರಗಳಾಗಿದೆ" ಎಂದು ಸಂಜೀವ್ ಕುಮಾರ್ ಮಾಹಿತಿ ತಿಳಿಸಿದ್ದಾರೆ.