ಬೆಂಗಳೂರು, ನ 10 (DaijiworldNews/SM): ಆಪರೇಷನ್ ಕಮಲ ಆಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ದೂರು ನೀಡಲು ಮುಂದಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿಯವರ ಭೇಟಿಗೆ ಅವಕಾಶ ಕೋರಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಕರ್ನಾಟಕ ಸಿಎಂ ಯಡಿಯೂರಪ್ಪ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇನ್ನು ವಾರದ ಹಿಂದೆ ಆಪರೇಷನ್ ಕಮಲ ಸಂಬಂಧಿತ ಬಿಎಸ್ ವೈ ಅವರದೆನ್ನಲಾದ ಆಡಿಯೋ ಸಾಕಷ್ಟು ಸಂಚಲನ ಮೂಡಿಸಿತ್ತು. ರಾಜಕೀಯವಾಗಿ ಸಾಕಶ್ಟು ಕುತೂಹಲಕ್ಕೂ ಕಾರಣವಾಗಿತ್ತು. ಇದರ ಪರ ವಿರೋಧ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದ್ದವು. ಈ ನಡುವೆ ಸಿಎಂ ಬಿಎಸ್ ವೈ ಅವರೇ ಆಡಿಯೋ ತಮ್ಮದೆಂದು ಒಪ್ಪಿಕೊಂಡಿದ್ದರು. ಈ ನಡುವೆ ಬಿಜೆಪಿ ನಾಯಕರು ಆಡಿಯೋ ವಿಚಾರವನ್ನು ಸಮರ್ಥಿಸಿದ್ದರು. ಬಿಎಸ್ ವೈ ಅವರು ಆಪರೇಷನ್ ಕಮಲ ನಡೆಸಿಲ್ಲ ಎಂದಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಈ ವಿಚಾರವನ್ನು ರಾಷ್ಟ್ರಪತಿ ಅಂಗಲಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಚೆಂಡು ರಾಷ್ಟ್ರಪತಿ ಅಂಗಲಕ್ಕೆ ಬಿದ್ದ ಬಳಿಕ ಮುಂದಿನ ನಿರ್ಧಾರ ಪ್ರಕಟಗೊಳ್ಳಲಿದೆ.