ಬೆಂಗಳೂರು, ನ.11(Daijiworld News/SS): ಐಎಂಎ ಸಂಸ್ಥೆಯಿಂದ ಲಂಚ ಪಡೆದು ಸಂಸ್ಥೆಗೆ ನೆರವಾಗಿರುವ ಆರೋಪದಲ್ಲಿ ಅಮಾನತುಗೊಂಡಿರುವ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್, ಗ್ರಾಮಲೆಕ್ಕಿಗ ಮಂಜುನಾಥ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಐಎಂಎ ಸಂಸ್ಥೆ ಪರ ವರದಿ ನೀಡಲು ಐಎಂಎ ನಿರ್ದೇಶಕರಿಂದ ಗ್ರಾಮ ಲೆಕ್ಕಿಗ ಮಂಜುನಾಥ್ ಮೂಲಕ ವಿಜಯಶಂಕರ್ ಮತ್ತು ನಾಗರಾಜ್ ಲಂಚ ಪಡೆದಿದ್ದರು. ಐಎಂಎ ಹಾಗೂ ಅಧಿಕಾರಿಗಳ ನಡುವೆ ಮಂಜುನಾಥ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಐಎಂಎ ಪರ ವರದಿ ನೀಡಿದ ಬಳಿಕ ಹಣ ಪಡೆದಿರುವುದಾಗಿ ಆರೋಪಿಗಳು ಸಿಬಿಐ ಮುಂದೆ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ, ಮೂವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಐಎಂಎ ಪ್ರಕರಣದಲ್ಲಿ ಸಿಬಿಐ ದಾಖಲಿಸುತ್ತಿರುವ 3ನೇ ಎಫ್ಐಆರ್ ಇದಾಗಿದ್ದು ಇದಕ್ಕೆ ಹಿಂದೆ ಎರಡು ದೋಷಾರೋಪ ಪಟ್ಟಿ ದಾಖಲಾಗಿದೆ. ರಾಜ್ಯ ಸರ್ಕಾರ ಈ ಮೂವರು ಅ ಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅನುಮತಿ ನೀಡಿದ ಬಳಿಕ ಸಿಬಿಐ ಎಫ್ಐಆರ್ ದಾಖಲಿಸಿದೆ.