ಬೆಂಗಳೂರು, ನ.11(Daijiworld News/SS): ಉಪ ಚುನಾವಣೆ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
15 ಕ್ಷೇತ್ರಗಳ ಉಪ ಚುನಾವಣೆ ಹಿನ್ನಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಹತ್ವ ಸಭೆ ನಡೆಸಿದರು. ಈ ವೇಳೆ ಕಾಗವಾಡ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ರಾಜು ಕಾಗೆ ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತ. ಉಪ ಚುನಾವಣೆ ಟಿಕೆಟ್ ಅನ್ನು ಅವರಿಗೆ ನೀಡುವ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ" ಎಂದು ಹೇಳಿದರು.
15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 8 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಎರಡು ದಿನದಲ್ಲಿ ಘೋಷಣೆ ಮಾಡುತ್ತೇವೆ. 7 ಕ್ಷೇತ್ರಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಿದ್ದೇವೆ. ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ತೀರ್ಮಾನಿಸಿದ್ದೇವೆ. ಅಧ್ಯಕ್ಷರು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಾರೆ" ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿ. ಕೆ. ಶಿವಕುಮಾರ್, ಎಂ. ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ. ಜೆ. ಜಾರ್ಜ್ ಮುಂತಾದವರು ಉಪಸ್ಥಿತರಿದ್ದರು.