ಕೋಲ್ಕತಾ, ನ.11(Daijiworld News/SS): ಬಂಗಾಳದ ಸಾಗಾರ ದ್ವೀಪಗಳು ಮತ್ತು ಬಾಂಗ್ಲಾದೇಶದ ಖೇಪುಪುರ ಕರಾವಳಿ ಪ್ರಾಂತ್ಯಕ್ಕೆ ಬುಲ್ ಬುಲ್ ಚಂಡಮಾರುತ ಅಪ್ಪಳಿಸಿದ್ದು, ಚಂಡಮಾರುತದ ಅಬ್ಬರಕ್ಕೆ ಈ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ತೀವ್ರ ಭೀತಿ ಸೃಷ್ಟಿಸಿರುವ ಬುಲ್ ಬುಲ್ ಚಂಡಮಾರುತದ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಸುಂದರಬನ್ ಒಂದರಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿನ ನೂರಾರು ಗ್ರಾಮಗಳಲ್ಲಿ ತೊಂದರೆಯಾಗಿದ್ದು, ಸಾವಿರಾರು ಮನೆಗಳು ಕುಸಿದಿವೆ. ಪರಿಣಾಮ ಬಂಗಾಳದ ಸುಮಾರು 2.73 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳು ಚಂಡಮಾರುತದ ಅಬ್ಬರಕ್ಕೆ ತತ್ತರಿಸಿ ಹೋಗಿದ್ದು, ನೂರಾರು ಮರಗಳು ಧರೆಗುರುಳಿವೆ. ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ರಕ್ಷಣಾ ಕಾರ್ಯಾದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಅನ್ವಯ ಪ್ರಸ್ತುತ ಅಪ್ಪಳಿಸಿರುವ ಬುಲ್ ಬುಲ್ ಚಂಡಮಾರುತ ಪ್ರತೀ ಗಂಟೆಗೆ 120 ರಿಂದ 135 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹೇಳಿದೆ.