ನವದೆಹಲಿ, ನ 11 (Daijiworld News/MB): ಭಾರತೀಯ ಚುನಾವಣೆಯ ಆಯೋಗದ ಸುಧಾರಣೆಗೆ ಹೆಸರುವಾಸಿಯಾಗಿದ್ದ, ಮಾಜಿ ಮುಖ್ಯ ಚುನಾವಣಾ ಆಯುಕ್ತ ತಿರುನೆಲ್ಲೈನಾರಾಯಣ ಅಯ್ಯರ್ ಶೇಷನ್ (86) ಭಾನುವಾರ ಸಂಜೆ ಚೆನ್ನೈನಲ್ಲಿರುವ ತನ್ನ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ಇವರ ನಿಷ್ಠಾವಂತ ಸರಕಾರಿ ಸೇವೆಗಾಗಿ 1996 ರಲ್ಲಿ ರಾಮೊನ್ ಮ್ಯಾಗ್ಸಸೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ತಿರುನೆಲ್ಲೈ ನಲ್ಲಿ 1932ರ ಡಿ. 15 ರಂದು ಜನಿಸಿದ ಶೇಷನ್ ಭೌತಶಾಸ್ತ್ರ ದ ವಿಷಯದಲ್ಲಿ ಪದವಿ ಪಡೆದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಡೆಮಾನ್ಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸಿ ನಂತರ ಐಎಎಸ್ ನಲ್ಲಿ ತೇರ್ಗಡೆ ಹೊಂದಿ ಭಾರತೀಯ ಆಡಳಿತ ಸೇವೆಗೆ ಸೇರಿದ್ದರು.
ಡಿ.12, 1990 ರಿಂದ ಡಿ.11, 1996 ವರೆಗೆ ಟಿಎನ್ ಶೇಷನ್ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು, 1995 ರ ಬ್ಯಾಚ್ ನ ತಮಿಳುನಾಡು ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದರು. 1989 ರಲ್ಲಿ 18 ನೇ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದ ಶೇಷನ್ ಹಾರ್ವರ್ಡ್ ವಿವಿಯಲ್ಲೂ ವ್ಯಾಸಂಗ ಮಾಡಿದ್ದು, ಎಡ್ವರ್ಡ್ ಎಸ್ ಮೇಸನ್ ಫೆಲೋಶಿಪ್ ಮೂಲಕ ಪೌರಾಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.