ನವದೆಹಲಿ, ನ 11 (Daijiworld News/MB): ಅಯೋಧ್ಯೆ ತೀರ್ಪಿನ ವಿಚಾರದಲ್ಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಿದ್ದು, ಈಗಾಗಲೇ ಪ್ರಚೋದನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ 90 ಜನರನ್ನು ದೇಶದಾದ್ಯಂತ ಬಂಧಿಸಿದ್ದಾರೆ.
ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕುವವರ ಮೇಲೆ ಪೊಲೀಸರು ಹದ್ದಿನಕಣ್ಣು ಇರಿಸಿ, ನವೆಂಬರ್ 9 ರ ಶನಿವಾರದಿಂದ ಈವರೆಗೂ 90 ಜನರನ್ನು ವಶಕ್ಕೆ ಪಡೆದಿದ್ದು ಆ ಪೈಕಿ ಉತ್ತರ ಪ್ರದೇಶದಲ್ಲೇ 77 ಜನರನ್ನು ಬಂಧಿಸಿದ್ದಾರೆ. ಇದಲ್ಲದೆ ಗ್ವಾಲಿಯರ್ ನಲ್ಲಿ ಇಬ್ಬರನ್ನು , ಮಧ್ಯ ಪ್ರದೇಶದ ಸಿಯೋನಿಯಲ್ಲಿ 8 ಮಂದಿಯನ್ನು ಬಂಧಿಸಿದ್ದಾರೆ
ಪೊಲೀಸರು ಈವರೆಗೂ ಅಯೋಧ್ಯೆ ತೀರ್ಪಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಮಾರು 8,275 ಪೋಸ್ಟ್ ಗಳನ್ನು ಪರಿಶೋಧನೆ ಮಾಡಿದ್ದಾರೆ.
ಭಾನುವಾರದ ಒಂದು ದಿನವೇ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅದೇ ದಿನ 4,563 ಪೋಸ್ಟ್ ಗಳನ್ನು ಪರಿಶೋಧಿಸಿದ್ದಾರೆ.
ಅಯೋಧ್ಯೆ ತೀರ್ಪು ಹೊರಬಂದ ನಂತರ ಯಾರು ಸಂಭ್ರಮಾಚರಣೆ ಮಾಡಬಾರದು ಎಂಬ ಆದೇಶವಿದ್ದರೂ ಗ್ವಾಲಿಯರ್ ಜೈಲು ವಾರ್ಡನ್ ಮಹೇಶ್ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.