ನವದೆಹಲಿ, ನ.11(Daijiworld News/SS): ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ 75 ರೂ.ಗಡಿದಾಟಿದೆ. ಈ ಬೆಲೆ ಏರಿಕೆ ಖರೀದಿದಾರರನ್ನು ಕಂಗಾಲಾಗುವಂತೆ ಮಾಡಿದೆ.
ಕೆಜಿ ಈರುಳ್ಳಿ ಬೆಲೆ ನೂರು ರೂ.ಗಳಾಗಲಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ. ಮಾತ್ರವಲ್ಲ, ಬೇಳೆಕಾಳುಗಳ ಬೆಲೆಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ ಬೇಳೆ-ಕಾಳುಗಳು ಕೈಗೆಟಕುತ್ತಿಲ್ಲ ಎನ್ನಲಾಗಿದೆ.
ಈರುಳ್ಳಿ ಹೆಚ್ಚಾಗಿ ಬೆಳೆಯುವ ಆಂಧ್ರಪ್ರದೇಶ, ಮಹಾರಾಷ್ಟ್ರ,ಉತ್ತರ ಪ್ರದೇಶ ಮತ್ತು ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಆದ್ದರಿಂದ ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳ ಮಾರುಕಟ್ಟೆಗಳಿಗೆ ಈರುಳ್ಳಿ ಸರಬರಾಜು ಕಡಿಮೆಯಾಗಿ, ಬೆಲೆ ಏರಿಕೆಯಾಗಿದೆ.
ದೆಹಲಿ, ಮುಂಬೈ, ಕೋಲ್ಕತ್ತಾ ಮುಂತಾದ ನಗರಗಳಲ್ಲಿ ಈರುಳ್ಳಿ ಬೆಲೆ 80 ರೂ. ಆಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಈರುಳ್ಳಿ ಬೆಲೆ 75 ರೂ. ಗಡಿದಾಟಿದೆ. ಕರ್ನಾಟಕದ ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಿಂದ ಬೆಂಗಳೂರಿಗೆ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಆಗಮಿಸುತ್ತಿಲ್ಲ ಎನ್ನಲಾಗಿದೆ.