ಕೊಚ್ಚಿ, ನ 11 (Daijiworld News/MSP): ತನ್ನ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ, ಕೇರಳದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮೊಣಕಾಲು ಉದ್ದದ ಕೂದಲನ್ನು ಬೋಳಿಸಿ ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಅಮಲಾ ಕ್ಯಾನ್ಸರ್ ಸಂಶೋಧನಾ ಕೇಂದ್ರಕ್ಕೆ ದಾನ ನೀಡಿದ್ದು ಇವರ ಈ ನಿಸ್ವಾರ್ಥ ಸೇವೆ, ವೈರಲ್ ಆಗಿದ್ದು ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.
ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಯಾಗಿರುವ 46 ವರ್ಷದ ಅಪರ್ಣಾ ಲವಕುಮಾರ್ ಇದೀಗ ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತನ್ನ ಹಿರಿಯ ಅಧಿಕಾರಿಗಳ ಅನುಮತಿ ಪಡೆಯುವುದನ್ನು ಹೊರತುಪಡಿಸಿ, ತನ್ನ ಕೂದಲು ದಾನ ಮಾಡುತ್ತಿರುವ ಬಗ್ಗೆ ಅಪರ್ಣಾ ಅವರು ಎಲ್ಲೂ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಅಲ್ಲದೆ "ತಾನು ಅಸಾಧಾರಣವಾದದನ್ನು ಮಾಡಿಲ್ಲ. ಹೀಗಾಗಿ ಇದರ ಬಗ್ಗೆ ಬರೆಯಬೇಕು ಅಥವಾ ಹೊಗಳಬೇಕು ಎಂದು ನನಗನಿಸುವುದಿಲ್ಲ. ನನ್ನ ಕೂದಲು ಒಂದು ಅಥವಾ ಎರಡು ವರ್ಷಗಳಲ್ಲಿ ಮತ್ತೆ ಬೆಳೆಯುತ್ತದೆ. ಅಗತ್ಯವಿರುವ ರೋಗಿಗಳಿಗೆ ತಮ್ಮ ಅಂಗಾಂಗವನ್ನೇ ದಾನ ಮಾಡುವವರು ನನ್ನ ಪ್ರಕಾರ ನಿಜವಾದ ಹೀರೋ" ಎನ್ನುತ್ತಾರೆ ಅಪರ್ಣ.
ವರದಿಗಳ ಪ್ರಕಾರ, ಸ್ಥಳೀಯ ಶಾಲೆಯಲ್ಲಿ ಜಾಗೃತಿ ಚಾಲನೆಯ ಸಮಯದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಭೇಟಿಯಾದ ಬಳಿಕ ಅಪರ್ಣಾ ತನ್ನ ಕೂದಲನ್ನು ದಾನ ಮಾಡುವ ಪ್ರೆರೇಪಣೆಯಾಯಿತಂತೆ.
ಕ್ಯಾನ್ಸರ್ ಪೀಡಿತರು, ಕೀಮೋಥೆರಪಿ ಬಳಿಕ ತಮ್ಮ ಕೂದಲನ್ನು ಕಳೆದುಕೊಂಡಾಗ ಧೈರ್ಯ ಅಥವಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಹುದು. ವಿದ್ಯಾರ್ಥಿಗಳಾಗಿದ್ದರೆ ತಮ್ಮ ಸಹಪಾಠಿಗಳ ವಿಚಿತ್ರ ನೋಟವು ಅವರನ್ನು ಚಿಂತೆಗೀಡು ಮಾಡುತ್ತದೆ. ಹೀಗಾಗಿ ಬೋಳು ತಲೆ ಎನ್ನುವುದು ದೊಡ್ಡ ವಿಚಾರವಲ್ಲ ಇದು ಸಾಮಾನ್ಯ ಎಂದು ಬೆಂಬಲಿಸಲು ಈ ನಿರ್ಧಾರ ಕೈಗೊಂಡಿದ್ದೇನೆ ಎನ್ನುತ್ತಾರೆ ಅಪರ್ಣಾ.
ಅಪರ್ಣಾ ಅವರ ನಿಸ್ವಾರ್ಥ ಸೇವೆ ಇದೇ ಮೊದಲಲ್ಲ, ಹನ್ನೊಂದು ವರ್ಷಗಳ ಹಿಂದೆ, ಮೂವರು ಮಕ್ಕಳು ತಮ್ಮ ತಾಯಿಯ ಮೃತದೇಹವನ್ನು ಬಿಡುಗಡೆ ಮಾಡಲು ಸಹಾಯ ಯಾಚಿಸಿದಾಗ ಅವರು ತಮ್ಮ ಚಿನ್ನದ ಬಳೆಗಳನ್ನು ದಾನ ಮಾಡಿದ್ದರು.