ಬೆಂಗಳೂರು, ನ.11(Daijiworld News/SS): ಕಾಂಗ್ರೆಸ್, ಬಿಜೆಪಿ ಎರಡೂ ಸ್ಥಳೀಯ ಚುನಾವಣೆಯಲ್ಲಿ ನಮಗಿಂತ ಮುಂದಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿ ಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಎಲ್ಲ ಕಡೆ ನಮಗೆ ಪ್ರಬಲ ಅಭ್ಯರ್ಥಿಗಳಿಲ್ಲ. ನಾಲ್ಕು-ಐದು ಕಡೆಗಳಲ್ಲಿ ನಮ್ಮ ಪಕ್ಷ ಹೋರಾಟ ಮಾಡಲಿದೆ. ಉಳಿದ ಕ್ಷೇತ್ರಗಳಲ್ಲಿ ಸಹ ನಮ್ಮ ಅಭ್ಯರ್ಥಿಗಳನ್ನು ಹಾಕುತ್ತೆವೆ ಎಂದು ಹೇಳಿದರು.
ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ. ಮತದಾರರು ಅದನ್ನು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಸ್ಥಳೀಯ ಚುನಾವಣೆಯಲ್ಲಿ ನಮಗಿಂತ ಮುಂದಿದ್ದಾರೆ ಎಂದರು.
ಟಿಕೆಟ್ ಹಂಚುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಇದೆ. ನನಗೆ ಈಗಲೂ ನಂಬಿಕೆ ಇದೆ ಬಿಜೆಪಿ ಸರ್ಕಾರಕ್ಕೆ ಅಪಾಯ ಇಲ್ಲ. ಏಕೆಂದರೆ ಕಾಂಗ್ರೆಸ್ ಜೆಡಿಎಸ್ ಒಂದಾಗುವುದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಅಪಾಯವಿಲ್ಲ ಎಂದು ಹೇಳಿದರು.