ನವದೆಹಲಿ, ನ 11 (Daijiworld News/MSP): ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಮಹಿಳಾ ಪೊಲೀಸ್ ಠಾಣೆಗೆ ತನ್ನ ಕಾರು ನುಗ್ಗಿಸಿದ ಘಟನೆ ಪಂಚಕುಲಾದ ಸೆಕ್ಟರ್ 5ರಲ್ಲಿ ನಡೆದಿದೆ. ಅಪಘಾತದಿಂದ ಪೊಲೀಸ್ ಅಧಿಕಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ತಕ್ಷಣವೇ ಚಾಲಕನನ್ನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಸೋನು ಗುಪ್ತಾ ಎಂದು ಗುರುತಿಸಲಾಗಿದೆ.
ವರದಿಯ ಪ್ರಕಾರ, ಪೊಲೀಸ್ ಠಾಣೆಯ ಗೇಟ್ ಬಳಿ ಪೊಲೀಸ್ ಅಧಿಕಾರಿ ಕೃಷ್ಣ ಚಂದ್ ಎಂಬವರು ಕರ್ತವ್ಯದಲ್ಲಿದ್ದರು. ಈ ವೇಳೆ ಸುಝಕಿ ಎಸ್ಎಕ್ಸ್ 4 ಕಾರನ್ನು ಚಲಾಯಿಸುತ್ತಿದ್ದ ಪಾನಮತ್ತನಾಗಿದ್ದ ಚಾಲಕ ಸೋನುಗುಪ್ತ ಮೊದಲು ತನ್ನ ವಾಹನವನ್ನು ವಿದ್ಯುತ್ ಕಂಬಕ್ಕೆ ಗುದ್ದಿ ಬಳಿಕ ಪೊಲೀಸ್ ಠಾಣೆಗೆ ನುಗ್ಗಿಸಿದ್ದಾನೆ. ಈ ವೇಳೆ ಕೃಷ್ಣ ಚಂದ್ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಕೃಷ್ಣಚಂದ್ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಪಘಾತದಿಂದ ವಿದ್ಯುತ್ ಇಲಾಖೆ ಮತ್ತು ಪೊಲೀಸ್ ಠಾಣೆಗೆ ಸಾಕಷ್ಟು ಹಾನಿಯಾಗಿದ್ದು , ಚಾಲಕ ವಿರುದ್ಧ ಬೇಜವಾಬ್ದಾರಿ ಚಾಲನೆ, ಕುಡಿದು ವಾಹನ ಚಲಾಯಿಸಿದ್ದು, ಇತರರ ಪ್ರಾಣಕ್ಕೆ ಕುತ್ತು ತರುವ ರೀತಿಯ ವರ್ತನೆ ಬಗ್ಗೆ ಐಪಿಸಿ ಸೆಕ್ಷನ್ ನ ವಿವಿಧ ವಿಭಾಗಗಳ ಅಡಿ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ. ಆರೋಪಿ ವೈದ್ಯಕೀಯ ಪರೀಕ್ಷೆಯ ವೇಳೆ ವಿಪರೀತ ಪಾನಮತ್ತನಾಗಿರುವುದು ಧೃಡಪಟ್ಟಿದೆ. ಪೊಲೀಸರು ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.